ನವದೆಹಲಿ :ಕೊರೊನಾ ವೈರಸ್ ವಿರುದ್ಧ ಹೋರಾಡಲು ಜಂಟಿ ಸಮರಕ್ಕೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ, 'ಮಾರಣಾಂತಿಕ ವೈರಸ್ ವಿರುದ್ಧ ಹೋರಾಡಲು ಭಾರತ ತನ್ನ 'ಸ್ನೇಹಿತರಿಗೆ' ಸಹಾಯ ಮಾಡಲು ಸಿದ್ಧವಾಗಿದೆ' ಎಂದು ಅಭಯ ನೀಡಿದ್ದಾರೆ.
ನಾವು ಈ ಸಾಂಕ್ರಾಮಿಕ ರೋಗದ ವಿರುದ್ಧ ಜಂಟಿಯಾಗಿ ಹೋರಾಡಬೇಕಾಗಿದೆ. ನಮ್ಮ ಸ್ನೇಹಿತರಿಗೆ ಸಹಾಯ ಮಾಡಲು ಭಾರತವು ಸಿದ್ಧವಾಗಿದೆ. ಇಸ್ರೇಲ್ ಜನರ ಯೋಗಕ್ಷೇಮ ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಇಸ್ರೇಲ್ ರಾಷ್ಟ್ರಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ನೀಡುವುದಾಗಿ ಭಾರತದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು, ಇಸ್ರೇಲ್ ರಾಷ್ಟ್ರಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮಾಡಿದ್ದಕ್ಕೆ ಭಾರತದ ಪ್ರಧಾನಿ ಹಾಗೂ ನನ್ನ ಸ್ನೇಹಿತ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಇಸ್ರೇಲ್ ರಾಷ್ಟ್ರದ ಪ್ರತಿ ಪ್ರಜೆಗಳು ನಿಮಗೆ ಧನ್ಯವಾದಗಳನ್ನು ಹೇಳಲು ಬಯಸುತ್ತಾರೆ' ಎಂದು ಟ್ವೀಟ್ ಮಾಡಿದ್ದರು.
ಮಾರಣಾಂತಿಕ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಪರಸ್ಪರ ಸಹಕಾರ ನೀಡುವುದಾಗಿ ನೇಪಾಳ ಪ್ರಧಾನಮಂತ್ರಿ ಕೆ ಪಿ ಶರ್ಮಾ ಅವರೊಂದಿಗೆ ಚರ್ಚಿಸಿದ್ದೇನೆ. ಈ ಸವಾಲನ್ನು ಎದುರಿಸಲು ನೇಪಾಳದ ಜನರ ಸಂಕಲ್ಪವನ್ನು ನಾನು ಪ್ರಶಂಸಿಸುತ್ತೇನೆ. ಕೋವಿಡ್-19 ವಿರುದ್ಧದ ನಮ್ಮ ಸಾಮಾನ್ಯ ಹೋರಾಟದಲ್ಲಿ ನಾವು ನೇಪಾಳದೊಂದಿಗೆ ಜಂಟಿಯಾಗಿ ನಿಲ್ಲುತ್ತೇವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಪಾನ್ ಪ್ರಧಾನಿ ಶಿಂಜೋ ಅಬೆ ಜತೆ ನಡೆಸಿದ ಚರ್ಚೆ ಫಲಪ್ರದವಾಗಿದೆ. ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವದ ಮೂಲಕ ಎದುರಿಸಲಿದ್ದೇವೆ ಎಂದು ಮೋದಿ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.