ನವದೆಹಲಿ:ದೇಶದ 2018-19ರ ಆರ್ಥಿಕ ಸಾಲಿನ ಹಣಕಾಸು ಕೊರತೆ ಪ್ರಮಾಣವು ಶೇ 3.4ರಷ್ಟಿದ್ದು, ರಾಜ್ಯಗಳ ಮೇಲಿನ ವೆಚ್ಚದ ಪ್ರಮಾಣ ಕೇಂದ್ರ ಕಡಿತಗೊಳಿಸಿದ್ದರಿಂದ ಈ ಗುರಿ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆ ಶೇ. 3.3ರಷ್ಟು ಅಂದಾಜು ಮಾಡಲಾಗಿತ್ತು. ಆದರೆ, ಈಗ ಅದು ಶೇ. 3.4ಕ್ಕೆ ಏರಿಕೆಯಾಗಲಿದೆ ಎಂದು ಹಣಕಾಸು ಸಚಿವಾಲಯ ಬಜೆಟ್ ಮಂಡನೆ ವೇಳೆ ಅಂದಾಜಿಸಿತ್ತು. ನಿಧಾನಗತಿಯ ಬೆಳವಣಿಗೆಯಿಂದಾಗಿ ವಿತ್ತೀಯ ಕೊರತೆ ಅಂತರ ಅಲ್ಪ ಹಿಗ್ಗಿದೆ. ಹಿಂದಿನ ಹಣಕಾಸು ವರ್ಷದ ಸೆಪ್ಟೆಂಬರ್ ಅಂತ್ಯಕ್ಕೆ ವಿತ್ತೀಯ ಕೊರತೆಯು ಬಜೆಟ್ ಅಂದಾಜಿನ ಶೇ. 91.3ರಷ್ಟಿತ್ತು.
ಮೌಲ್ಯದ ಲೆಕ್ಕದಲ್ಲಿ 2018-19ನೇ ಹಣಕಾಸು ವರ್ಷಕ್ಕೆ ₹ 6.24 ಲಕ್ಷ ಕೋಟಿಯಷ್ಟು ವಿತ್ತೀಯ ಕೊರತೆಯ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ಮೊದಲಾರ್ಧದಲ್ಲಿಯೇ ₹ 5.94 ಲಕ್ಷ ಕೋಟಿಗೆ ತಲುಪಿತ್ತು. ಸರ್ಕಾರದ ವರಮಾನ ಮತ್ತು ವೆಚ್ಚ ನಡುವಣ ಅಂತರವೇ ವಿತ್ತೀಯ ಕೊರತೆಯಾಗಿದೆ.
2018-19ರ ಹಣಕಾಸು ವರ್ಷದ ಮಾರ್ಚ್ 31ರ ಅಂತ್ಯಕ್ಕೆ ಒಟ್ಟು ದೇಶಿ ಉತ್ಪಾದನೆಯ ವಿತ್ತೀಯ ಕೊರತೆಯು 3.4ಕ್ಕೆ ತಲುಪಿದೆ. ರಾಜ್ಯಗಳ ವೆಚ್ಚದಲ್ಲಿ ಕಡಿತ ಮತ್ತು ಸಣ್ಣ ಉಳಿತಾಯ ನಿಧಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಸಾಲ ಪಡೆದಿದೆ. ಹೀಗಾಗಿ, ಹಣಕಾಸು ಕೊರತೆಯ ಪ್ರಮಾಣ ಅಲ್ಪ ಪ್ರಮಾಣದಲ್ಲಿ ಏರಿಕೆ ಆಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಹಣಕಾಸು ಸಚಿವಾಲಯದ ಉದ್ದೇಶಿತ ವಾರ್ಷಿಕ ಆದಾಯ ಸಂಗ್ರಹ ಗುರಿ ಸಹ ತಲುಪಿಲ್ಲ. ₹ 500 ಶತಕೋಟಿಯಷ್ಟು ತೆರಿಗೆ ಕೊರತೆ ಎದುರಾಗಿದೆ. ವಿವಿಧ ಸಚಿವಾಲಯಗಳ ನಿಧಿ ಹಂಚಿಕೆಯ ಖರ್ಚು- ವೆಚ್ಚಗಳ ಕುರಿತು ವಿವರಗಳನ್ನು ಹಂಚಿಕೊಳ್ಳಲು ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.