ನವದೆಹಲಿ:ಭಾರತದ ಮೊಟ್ಟ- ಮೊದಲ ಸಮುದ್ರದಾಳದಲ್ಲಿ ರೈಲು ಸುರಂಗ ಮಾರ್ಗ ಯೋಜನೆಯ ಕಾಮಗಾರಿ ಶ್ರೀಘ್ರದಲ್ಲೇ ಆರಂಭವಾಗಲಿದ್ದು, ಮುಂಬೈ- ಅಹಮದಾಬಾದ್ ನಡುವಿನ ಪ್ರಯಾಣದ ಅವಧಿ 5 ಗಂಟೆಗಳಷ್ಟು ತಗ್ಗಲಿದೆ.
ಇತ್ತೀಚೆಗೆ ನಡೆದ ಸುರಂಗ ಮಾರ್ಗಗಳ ಅಭಿವೃದ್ಧಿ ಯೋಜನೆ ಅಡಿ ಈ ಸುರಂಗ ಮಾರ್ಗದ ಟೆಂಡರ್ ನೀಡುವ ಪ್ರಕ್ರಿಯೆ ಹೊರ ಬಿದಿದ್ದೆ. ಟನಲ್ ಬೋರಿಂಗ್ ಮಷಿನ್ (ಟಿಬಿಎಂ) ಮತ್ತು ನ್ಯೂ ಆಸ್ಟ್ರಿಯನ್ ಟನಲಿಂಗ್ ಮೆಥಡ್ (ಎನ್ಎಟಿಎಂ) ಬಳಸಿಕೊಂಡು ಡಬಲ್- ಲೈನ್ ಹೈ ಸ್ಪೀಡ್ ರೈಲ್ವೆ ಪರೀಕ್ಷೆ ಕಾರ್ಯಗತಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಕೇಂದ್ರ ಸರ್ಕಾರ ರಾಷ್ಟ್ರೀಯ ಹೈ ಸ್ಪೀಡ್ ರೈಲು ನಿಗಮ ನಿಯಮಿತ (ಎನ್ಎಚ್ಎಸ್ಆರ್ಸಿಎಲ್ ಹಾಗೂ ವಿಶೇಷ ಕಾರ್ಯ ಘಟಕಗಳನ್ನು (ಎಸ್ಪಿವಿ) ಸ್ಥಾಪಿಸಿದೆ . ಉದ್ದೇಶಿತ ಯೋಜನೆ ಪ್ರಕಾರ ಮುಂಬೈ- ಅಹಮದಾಬಾದ್ ನಡುವಿನ 508 ಕಿ.ಮೀ. ಅಂತರವನ್ನು ಬುಲೆಟ್ ರೈಲು 350 ಕಿ. ಮೀ ಗರಿಷ್ಠ ವೇಗದಲ್ಲಿ ಕೇವಲ 2 ಗಂಟೆಗಳಲ್ಲಿ ಕ್ರಮಿಸಲಿದೆ.
ಯೋಜನೆಯ ಉದ್ದೇಶಿತ ಟೆಂಡರ್ನಲ್ಲಿ ಕಾಮಗಾರಿಯನ್ನು 3.5 ವರ್ಷ ಒಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಸಮುದ್ರದಡಿ ಹಳಿ ನಿರ್ಮಾಣ ಕಾರ್ಯಸಾಧ್ಯತೆ ಕುರಿತು ಕಳೆದ ಒಂದು ವರ್ಷ ಎನ್ಎಚ್ಎಸ್ಆರ್ಸಿಎಲ್, ಆರ್ಐಟಿಎಸ್ ಮತ್ತು ಜಪಾನ್ ಕಾವಾಸಕಿ ಜಿಯೋಲಾಜಿಕಲ್ ಎಂಜಿನಿಯರಿಂಗ್ ಫರ್ಮ್ನ ಭೂಗರ್ಭಶಾಸ್ತ್ರಜ್ಞರು ಅಧ್ಯಯನ ನಡೆಸಿದ್ದಾರೆ.
ಒಟ್ಟು 508 ಕಿ.ಮೀ. ಯೋಜನೆ ಇದಾಗಿದ್ದು, ಜಮೀನು ವಶಪಡಿಕೊಳ್ಳುವುದು, ಅದರಿಂದ ಉದ್ಭವಿಸುವ ನ್ಯಾಯಾಂಗ ಸಮರ ಮತ್ತು ಇತರ ಕಾನೂನಾತ್ಮಕ ಸಮಸ್ಯೆಗಳನ್ನು ನಿವಾರಿಸಲು ರೈಲ್ವೆ ಇಲಾಖೆಯು ಎತ್ತರಿಸಿದ ಮಾರ್ಗದಲ್ಲಿ (ಎಲವೇಟೆಡ್) ಯೋಜನೆ ಅನುಷ್ಠಾನಕ್ಕೆ ಮೊರೆ ಹೋಗಿದೆ.
ರೈಲಿನ 508 ಕಿ.ಮೀ. ಉದ್ದ ಮಾರ್ಗದ ಪೈಕಿ 21 ಕಿ.ಮೀ ಉದ್ದದ ಸುರಂಗ ಮಾರ್ಗವು ಸಮುದ್ರದ ಅಡಿಯಲ್ಲಿ ನಿರ್ಮಾಣವಾಗಲಿದೆ. ಬಹುತೇಕ ಎತ್ತರಿಸಿದ ಮಾರ್ಗದಲ್ಲಿ ಹೈಸ್ಪೀಡ ರೈಲು ಓಡಲಿದೆ. ಆದರೆ, ಥಾಣೆ ಕೊಲ್ಲಿಯಿಂದ ವಿರಾರ್ ಕಡೆಗೆ ಸುರಂಗ ಮಾರ್ಗ ನಿರ್ಮಾಣವಾಗಲಿದ್ದು, ಸಮುದ್ರದ ಅಡಿಯಲ್ಲಿ ರೈಲು ಸಂಚರಿಸಲಿದೆ.
ಈ ರೈಲು ಮಾರ್ಗವು ಒಟ್ಟು 12 ರೈಲ್ವೆ ನಿಲ್ದಾಣಗಳನ್ನು ಕ್ರಮಿಸಲಿದೆ. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್, ಥಾಣೆ, ಬೋಯಿಸರ್, ವಿರಾರ್, ವಾಪಿ, ಸೂರತ್, ಬಿಲಿಮೊರಾ, ಭರುಚ್, ಸಾಬರ್ಮತಿ, ಬರೋಡಾ, ಆನಂದ್ ಮತ್ತು ಅಹಮದಾಬಾದ್ ನಿಲ್ದಾಣಗಳನ್ನು ಒಳಗೊಳ್ಳಲಿವೆ. ಕಾಮಗಾರಿ ಪೂರ್ತಿಯಾದ ಬಳಿಕ ಇದು ದೇಶದ ಮೊದಲ ಸಮುದ್ರದಾಳದ ರೈಲು ಮಾರ್ಗ ಎಂಬ ಹೆಗ್ಗಳಿಕೆಯನ್ನು ಪಡೆಯಲಿದೆ.