ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ 10ರಷ್ಟು ಕುಗ್ಗುವ ಸಾಧ್ಯತೆ ಇದೆ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಯೋಜನಾ ಆಯೋಗದ ಮಾಜಿ ಸದಸ್ಯ ಅಭಿಜಿತ್ ಸೇನ್ ಅಂದಾಜಿಸಿದ್ದಾರೆ.
ಕೃಷಿ ಸಂಬಂಧಿತ ವಿಷಯಗಳ ತಜ್ಞರೂ ಆಗಿರುವ ಸೇನ್, 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲು ಸರ್ಕಾರದಿಂದ ಸಾಧ್ಯವಾಗುವುದಿಲ್ಲ. ನಾವು ಈ ವರ್ಷ (2020-21) ಶೇ 10ರಷ್ಟು ನಕಾರಾತ್ಮಕ ಬೆಳವಣಿಗೆಯತ್ತ ಸಾಗುತ್ತಿದ್ದೇವೆ. ಇದು ಖಂಡಿತವಾಗಿಯೂ ಶೇ7.5ರಷ್ಟು ಮೈನಸ್ ಆಗುವುದಿಲ್ಲ. ಅದು ಅದಕ್ಕಿಂತ ಕೆಟ್ಟದಾಗಿದೆ. ಮುಂದಿನ ವರ್ಷ ಭಾರಿ ಪ್ರಮಾಣದಲ್ಲಿ ಇದು ಮರುಕಳಿಸಬಹುದೆಂದು ಜನರು ಆಶಿಸುತ್ತಿದ್ದಾರೆ. ನನಗೆ ಇದರ ಬಗ್ಗೆ ಅನುಮಾನವಿದೆ ಎಂದು ಪಿಟಿಐಗೆ ತಿಳಿಸಿದ್ದಾರೆ.
ಆರ್‌ಬಿಐ ಪ್ರಕಾರ, 2020-21ರಲ್ಲಿ ಆರ್ಥಿಕತೆಯು ಶೇ 7.5ರಷ್ಟು ಕುಗ್ಗುವ ಸಾಧ್ಯತೆಯಿದೆ ಎಂದು ಅಂದಾಜಿಸಿದೆ. ಇದೇ ಸಮಯದಲ್ಲಿ ಏನೂ ಮಾಡದೆ ಇದ್ದರೂ ಅದು ಸಂಭವಿಸುತ್ತದೆ ಎಂಬುದನ್ನು ಸರ್ಕಾರ ನಿರೀಕ್ಷಿಸುತ್ತಿದೆ. ಆದ್ದರಿಂದ ಇದೊಂದು ಕೇವಲ ಭರವಸೆಯಾಗಿಯೇ ಉಳಿದಿದೆ. ಸರ್ಕಾರದ ನೈಜ ಖರ್ಚು ಬಜೆಟ್ನಲ್ಲಿ ಲೆಕ್ಕಾಚಾರ ಮಾಡಿದ್ದಕ್ಕಿಂತ ಕಡಿಮೆಯಾಗಿದೆ ಎಂದು ಅವರು ಇದೇ ವೇಳೆ ಹೇಳಿದರು.