ನವದೆಹಲಿ: ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಗಡಿ ಉದ್ವಿಗ್ನತೆಯು ಉಭಯ ರಾಷ್ಟ್ರಗಳ ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳ ಮೇಲೆ ತಕ್ಷಣವೇ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈಗಿನ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡರೆ ದ್ವಿಪಕ್ಷೀಯ ವ್ಯಾಪಾರ ಸ್ನೇಹದ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಪ್ರಸ್ತುತ ಗಡಿ ಉದ್ವಿಗ್ನತೆಯಿಂದ ದ್ವಿಪಕ್ಷೀಯ ವ್ಯಾಪಾರ ಸ್ನೇಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಉಭಯ ದೇಶಗಳ ವಹಿವಾಟುಗಳಿಗೆ ಪರಸ್ಪರ ಮಾರುಕಟ್ಟೆಯಲ್ಲಿ ಅನ್ವೇಷಿಸುವಂತಹ ದೊಡ್ಡ ವ್ಯಾಪಾರದ ಅವಕಾಶಗಳಿವೆ ಎಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ (ಎಫ್‌ಐಇಒ) ಅಧ್ಯಕ್ಷ ಎಸ್.ಕೆ. ಸರಫ್ ಹೇಳಿದ್ದಾರೆ.
ಹ್ಯಾಂಡ್ ಟೂಲ್ಸ್ ಅಸೋಸಿಯೇಷನ್ ಅಧ್ಯಕ್ಷ ಸುಭಾಷ್ ಚಂದರ್ ರಾಲ್ಹಾನ್ ಮಾತನಾಡಿ, ಚೀನಾ ಭಾರತೀಯ ರಫ್ತುದಾರರಿಗೆ ದೊಡ್ಡ ಮಾರುಕಟ್ಟೆಯಾಗಿದೆ. ವ್ಯಾಪಾರದ ಕೊರತೆ ನೀಗಿಸಲು ನೆರೆಯ ದೇಶಕ್ಕೆ ರಫ್ತು ಹೆಚ್ಚಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ಚೀನಾದಿಂದ ಆಮದಿನ ಮೇಲೆ ಯಾವುದೇ ರೀತಿಯ ನಿರ್ಬಂಧ ಹೇರುವುದು ನಮ್ಮ ರಫ್ತುಗಳ ಮೇಲೆ ಪರಿಣಾಮ ಬೀರಬಹುದು. ಆದರೆ, ಗಡಿಗಳಲ್ಲಿ ಉದ್ವಿಗ್ನತೆ ಉಲ್ಬಣಗೊಂಡರೆ ಅದು ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳ ಮೇಲೆ ಪರಿಣಾಮ ಉಂಟಾಗಬಹುದು ಎಂದರು.
ಜವಳಿ ರಫ್ತು ಉತ್ತೇಜನ ಮಂಡಳಿ (ಎಇಪಿಸಿ) ಅಧ್ಯಕ್ಷ ಎ. ಶಕ್ತಿವೆಲ್ ಮಾತನಾಡಿ, ಉಭಯ ದೇಶಗಳು ಶೀಘ್ರದಲ್ಲೇ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದಿದ್ದರೆ ವಾಣಿಜ್ಯ ಚಟುವಟಿಕಗಳು ಪರಿಣಾಮ ಎದುರಿಸಬೇಕಾಗಬಹುದು. ಪರಿಸ್ಥಿತಿ ತೀರಾ ಹದಗೆಟ್ಟರೆ ಇನ್ನಷ್ಟು ಸಮಸ್ಯೆ ಉಂಟಾಗುತ್ತದೆ. ನಾವು ಅಧಿಕ ಪ್ರಮಾಣದಲ್ಲಿ ಜವಳಿ ರಫ್ತು ಮಾಡುವುದಿಲ್ಲ. ಆದರೆ, ಚೀನಾದಿಂದ ಸಾಕಷ್ಟು ಬಟ್ಟೆಗಳನ್ನು ಆಮದು ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಚೀನಾದ ಮೇಲೆ ಯಾವುದೇ ರೀತಿಯ ವ್ಯಾಪಾರ ನಿರ್ಬಂಧ ಹೇರುವುದು ಭಾರತಕ್ಕೆ ಅಡ್ಡ ಪರಿಣಾಮ ಬೀರಬಹುದು. ಎಐಪಿಐ (ಸಕ್ರಿಯ ಔಷಧೀಯ ಪದಾರ್ಥಗಳು) ನಂತಹ ಹಲವು ನಿರ್ಣಾಯಕ ಉತ್ಪನ್ನಗಳಿಗಾಗಿ ನಾವು ಚೀನಾ ಮೇಲೆಯೇ ಅವಲಂಬನೆ ಆಗಿದ್ದೇವೆ. ಆ ಉತ್ಪನ್ನಗಳಿಗೆ ನಮಗೆ ಪರ್ಯಾಯ ಮಾರ್ಗಗಳು ಕಾಣಿಸುತ್ತಿಲ್ಲ. ಈ ಪರಿಸ್ಥಿತಿ ಒಂದು ದಿನದಲ್ಲಿ ಬದಲಾವಣೆ ಆಗುವಂತಹದಲ್ಲ ಎನ್ನುತ್ತಾರೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಪ್ರಾಧ್ಯಾಪಕ ಬಿಸ್ವಾಜಿತ್ ಧಾರ್.
ಚೀನಾ- ಅಮೆರಿಕ ವಾಣಿಜ್ಯ ಸಮರ
ಕಳೆದ ವರ್ಷ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಚೀನಾದ 300 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಸರಕುಗಳ ಮೇಲೆ ಸುಂಕ ಹೇರಿದ್ದಕ್ಕೆ ಪ್ರತಿಯಾಗಿ ಚೀನಾ ಕೂಡ ಅಮೆರಿಕದ 75 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಸರಕುಗಳ ಮೇಲೆ ಹೆಚ್ಚುವರಿ ಶೇ10ರಷ್ಟು ಸುಂಕ ಹೇರಿಕೆ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿತ್ತು.
ಆ ಮೂಲಕ ಎರಡೂ ರಾಷ್ಟ್ರಗಳು ಉದ್ದೇಶಪೂರ್ವಕವಾಗಿ ವಾಣಿಜ್ಯ ಸಮರಕ್ಕೆ ಮುಂದಾದವು. ಇದರಿಂದ ಉಭಯ ರಾಷ್ಟ್ರಗಳ ರಫ್ತು ಮತ್ತು ಆಮದು ನಡುವೆ ವಹಿವಾಟು ಕೊರತೆ ಕಾಣಿಸಿಕೊಂಡಿತ್ತು. ಜಾಗತಿಕ ಆರ್ಥಿಕತೆಯನ್ನು ಆರ್ಥಿಕ ಹಿಂಜರಿತಕ್ಕೆ ತಳ್ಳಿದ್ದವು. ಹಲವು ಕ್ಷೇತ್ರಗಳ ಉದ್ಯಮಗಳು ಸಾಕಷ್ಟು ನಷ್ಟ ಅನುಭವಿಸಬೇಕಾಯಿತು. ಇದರಿಂದ ಎಚ್ಚೆತ್ತುಕೊಂಡ ಉಭಯ ರಾಷ್ಟ್ರಗಳು ವಾಣಿಜ್ಯ ಸಮರ ಅಂತ್ಯಕ್ಕೆ ಮುಂದಾದವು. ಅಷ್ಟರಲ್ಲಿ ಕೊರೊನಾ ವೈರಸ್ ಹಬ್ಬಿ, 'ವೈರಾಣು ಹರಡಲು ಚೀನಾವೇ ಮುಖ್ಯ ಕಾರಣ'ವೆಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರ ಆರೋಪ ಮಾಡಿದರು. ತೆರೆ ಕಾಣಬೇಕಿದ್ದ ವಾಣಿಜ್ಯ ಸಮರ ಮತ್ತೆ ಚಿಗುರೊಡೆಯಿತು.