ನವದೆಹಲಿ: ಜಾಗತಿಕ ಆವಿಷ್ಕಾರ ಸೂಚ್ಯಂಕದ (ಗ್ಲೋಬಲ್ ಇನೋವೇಷನ್ ಇಂಡೆಕ್ಸ್) 2020ನೇ ಸಾಲಿನಲ್ಲಿ ಭಾರತ 52ನೇ ಸ್ಥಾನದಿಂದ 48ನೇ ಸ್ಥಾನಕ್ಕೆ ಜಿಗಿದಿದೆ.
ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಭಾರತ ಮೊದಲ ಬಾರಿಗೆ ಅಗ್ರ 50 ದೇಶಗಳೊಂದಿಗೆ ಸೇರಿಕೊಂಡಿದ್ದು, ನಾಲ್ಕು ಸ್ಥಾನ ಏರಿಕೆಯಾಗಿ 48ನೇ ಸ್ಥಾನದಲ್ಲಿದೆ. ಮಧ್ಯ ಮತ್ತು ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ.
ಇನೋವೇಟಿವ್ ಮತ್ತು ನವಿನ ಮಾದರಿಯ ತಂತ್ರಜ್ಞಾನಗಳಲ್ಲಿ ಉತ್ತಮ ಸಾಧನೆ ತೋರುತ್ತಿರುವ ಭಾರತ, ಕಳೆದ ವರ್ಷ ಜಾಗತಿಕ ಸೂಚ್ಯಂಕದಲ್ಲಿ 52ನೇ ಸ್ಥಾನದಲ್ಲಿತ್ತು. ಒಂದೇ ವರ್ಷದಲ್ಲಿ 4 ಅಂಕಗಳ ಜಿಗಿತ ದಾಖಲಿಸಿದೆ. 2015ರಲ್ಲಿ 81ನೇ ಸ್ಥಾನದಲ್ಲಿದ್ದು, 4 ವರ್ಷಗಳಲ್ಲಿ 33 ಅಂಕ ಏರಿಕೆ ಕಂಡಿದೆ.
ಐಸಿಟಿ ಸೇವೆಗಳ ರಫ್ತು, ವಿಜ್ಞಾನ ಮತ್ತು ಎಂಜಿನಿಯರಿಂಗ್ ಪದವೀಧರರು, ವಿಶ್ವವಿದ್ಯಾಲಯಗಳ ಗುಣಮಟ್ಟ, ಒಟ್ಟು ಬಂಡವಾಳ ರಚನೆ, ವ್ಯಾಪಕ ಆರ್ಥಿಕ ಹೂಡಿಕೆಗಳ ಅಳತೆ ಮತ್ತು ಸೃಜನಶೀಲ ಸರಕುಗಳ ರಫ್ತು ಸೇರಿದಂತೆ ಇತರ ನಾವೀನ್ಯತೆಯಲ್ಲಿ ಭಾರತವು ವಿಶ್ವದ ಅಗ್ರಸ್ಥಾನದಲ್ಲಿ ಸಾಗುತ್ತಿದೆ ಎಂದು ವರದಿ ಹೇಳಿದೆ.
ಐಸಿಟಿ (ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ) ಸೇವೆಗಳ ರಫ್ತು, ಸರ್ಕಾರಿ ಆನ್‌ಲೈನ್ ಸೇವೆಗಳು, ವಿಜ್ಞಾನ ಮತ್ತು ಎಂಜಿನಿಯರಿಂಗ್ ಪದವೀಧರರು ಮತ್ತು ಆರ್ & ಡಿಯ ತೀವ್ರ ಜಾಗತಿಕ ಕಂಪನಿಗಳಂತಹ ಸೂಚ್ಯಂಕಗಳಲ್ಲಿ ಭಾರತ ಅಗ್ರ 15 ಸ್ಥಾನದಲ್ಲಿದೆ.
ವಿಶ್ವದ ಅಗ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಮೂಹಗಳಲ್ಲಿ ಭಾರತದ ನಗರಗಳು ಅತ್ಯುತ್ತಮವಾಗಿವೆ. ಬಾಂಬೆ ಮತ್ತು ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಗಳು ಉನ್ನತ ವೈಜ್ಞಾನಿಕ ಪ್ರಕಟಣೆಗಳು ಪ್ರಕಟಿಸುವಲ್ಲಿ ಮುಂಚೂಣಿಯಲ್ಲಿವೆ.
ಸ್ವಿಟ್ಜರ್ಲ್ಯಾಂಡ್, ಸ್ವೀಡನ್, ಅಮೆರಿಕ, ಇಂಗ್ಲೇಂಡ್ ಮತ್ತು ನೆದರ್ಲ್ಯಾಡ್ಸ್ ಈ ವರ್ಷದ ವಾರ್ಷಿಕ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿವೆ. ವರದಿ ಪ್ರಕಾರ ಭಾರತ, ಚೀನಾ, ಫಿಲಿಪೈನ್ಸ್ ಮತ್ತು ವಿಯೆಟ್ನಾಂ ಈ ವರ್ಷದದಲ್ಲಿ ನಾವೀನ್ಯತೆ ಶ್ರೇಯಾಂಕದಲ್ಲಿ ಅತ್ಯಂತ ಯಶಸ್ವಿ ಪ್ರಗತಿ ಹೊಂದಿರುವ ಆರ್ಥಿಕತೆಗಳಾಗಿವೆ.