ನವದೆಹಲಿ:ಆದಾಯ ತೆರಿಗೆ ಇಲಾಖೆ, ತೆರಿಗೆದಾರರು ತಮ್ಮ ಆದಾಯ ತೆರಿಗೆಯ ಇ-ಫೈಲಿಂಗ್ ಖಾತೆಯ ಬಗ್ಗೆ ಜಾಗರೂಕರಾಗಿರಬೇಕು. ಯಾವುದೇ ಅನಧಿಕೃತ ವ್ಯಕ್ತಿಯಿಂದ ಖಾತೆಯ ದುರುಪಯೋಗ ಗಮನಕ್ಕೆ ಬಂದಲ್ಲಿ ತಕ್ಷಣವೇ ಮಾಹಿತಿ ನೀಡಬೇಕು ಎಂದು ಸೂಚಿಸಿದೆ.
ನಿಮ್ಮ ಇ-ಫೈಲಿಂಗ್ ಖಾತೆಯು ಅನಧಿಕೃತ ಹೊಂದಾಣಿಕೆ ಅಥವಾ ಪ್ರವೇಶ ಆಗಬಹುದು. ಇದು ನಿಮ್ಮನ್ನು ಅಪರಾಧಕ್ಕೆ ಎಡೆ ಮಾಡಿಕೊಡಲಿದೆ. ಇಂತಹ ಶಂಕೆಗಳು ನಿಮ್ಮ ಗಮನಕ್ಕೆ ಬಂದರೇ ದಯವಿಟ್ಟು ಘಟನೆಯ ಕುರಿತು ಹತ್ತಿರದ ಪೊಲೀಸ್ ಅಥವಾ ಸೈಬರ್ ಕ್ರೈಮ್ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಐಟಿ ಕೋರಿದೆ.
ಸೈಬರ್ ಅಪರಾಧ ಸಂಬಂಧಿಸಿದ ದೂರುಗಳನ್ನು ಆನ್‌ಲೈನ್‌ನಲ್ಲಿ ನೀಡಲು ಕೇಂದ್ರ ಸರ್ಕಾರ, https://cybercrime.gov.in/ ಸೈಟ್ ಅನ್ನು ಅನುಷ್ಠಾನಕ್ಕೆ ತಂದಿದೆ. ಆನ್‌ಲೈನ್ ಕ್ರಿಮಿನಲ್ ದೂರು ಅಥವಾ ಎಫ್‌ಐಆರ್ ದಾಖಲಿಸಬಹುದು. ಸೈಬರ್ ಅಪರಾಧಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಯು ಸಂಬಂಧಿತ ಕಾನೂನು ಅನುಷ್ಠಾನ ಅಧಿಕಾರಿಗಳೊಂದಿಗೆ ಹಂಚಿಕೊಳ್ಳುತ್ತದೆ ಎಂದು ವಿವರಿಸಿದೆ.
ಮುನ್ನೆಚ್ಚರಿಕೆಯ ಕ್ರಮವಾಗಿ ದಯವಿಟ್ಟು ನಿಮ್ಮ ಲಾಗಿನ್ ಗೌಪ್ಯತೆ ಅಥವಾ ಇತರ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಇಲಾಖೆಯ ವೆಬ್ ಪೋರ್ಟಲ್ ಲಾಗ್ ಇನ್ ಮೂಲಕ ಓರ್ವ ವ್ಯಕ್ತಿಯ ಅಥವಾ ಘಟಕದ ಇ-ಫೈಲಿಂಗ್ ಖಾತೆಯನ್ನು ಪ್ರವೇಶಿಸಬಹುದು. ಇದಕ್ಕಾಗಿ https://www.incometaxindiaefiling.gov.in ಲಿಂಕ್ ಬಳಸಬಹುದು.
ವಿಶ್ವದಾದ್ಯಂತ ಕೋವಿಡ್-19 ಸಾಂಕ್ರಾಮಿಕ ಸೋಂಕು ಹೆಚ್ಚುತ್ತಿರುವುದರಿಂದ ಆನ್‌ಲೈನ್ ಕೆಲಸಗಳು ಯಥೇಚ್ಛವಾಗುತ್ತಿವೆ. ಸಂಭವನೀಯ ಸೈಬರ್ ದಾಳಿಗಳನ್ನು ತಪ್ಪಿಸಲು ಐಟಿ ಇಲಾಖೆ ಈ ಸಲಹೆ ನೀಡುತ್ತಿದೆ.