ಹೈದರಾಬಾದ್: ಕಳೆದ ಎರಡು ತಿಂಗಳಲ್ಲಿ ಮನೆಯ ಬಜೆಟ್ ವೆಚ್ಚ ಎಣಿಕೆಗೆ ಸಿಗದೆ ಏರಿಕೆ ಆಗುತ್ತಿದೆ. ಏಕೆಂದರೆ ದಿನನಿತ್ಯ ಬಳಕೆಯ ದ್ವಿದಳ ಧಾನ್ಯ, ಮಾಂಸ ಮತ್ತು ಮೀನು, ಮಸಾಲೆ, ತರಕಾರಿ ಹಾಗೂ ವೈಯಕ್ತಿಕ ಆರೈಕೆ ವಸ್ತುಗಳ ಬೆಲೆ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಹೀಗಾಗಿ, ಹೆಚ್ಚಿನ ಹಣ ಪಾವತಿಸಬೇಕಾಗಿದೆ.
ಜೂನ್ ಮತ್ತು ಜುಲೈನ ಎರಡೂ ತಿಂಗಳಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ದತ್ತಾಂಶವು ಧಾನ್ಯ, ಹಾಲು, ಹಣ್ಣು, ಶಿಕ್ಷಣ, ಆರೋಗ್ಯ, ಬಟ್ಟೆ ಮತ್ತು ಮನರಂಜನೆಯಂತಹ ವೆಚ್ಚಗಳು ಹೆಚ್ಚಳವಾಗಿ, ಹಣದುಬ್ಬರ ಸಹ ಏರಿಕೆ ಆಗಿದೆ ಎಂಬುದನ್ನು ತೋರಿಸುತ್ತಿದೆ.
ಉದಾ: ಮಾಂಸ ಮತ್ತು ಮೀನುಗಳ ಚಿಲ್ಲರೆ ಬೆಲೆ ಜುಲೈನಲ್ಲಿ ಶೇ 18.8ರಷ್ಟು ಏರಿಕೆಯಾಗಿದೆ. ಈ ವರ್ಗದ ಉತ್ಪನ್ನಗಳು ಜೂನ್‌ನಲ್ಲಿ ವರ್ಷದಿಂದ ವರ್ಷಕ್ಕೆ ಶೇ 16.2ರಷ್ಟು ಏರಿಕೆ ಕಂಡಿದೆ.
ಚಿಲ್ಲರೆ ಮಟ್ಟದಲ್ಲಿ ದ್ವಿದಳ ಧಾನ್ಯಗಳ ಬೆಲೆ ಜುಲೈನಲ್ಲಿ ಶೇ 15.9ರಷ್ಟು ಹೆಚ್ಚಾಗಿದೆ. ಜೂನ್‌ನಲ್ಲಿ ಈ ವರ್ಗದ ಹಣದುಬ್ಬರ ದರ ಶೇ 16.7ರಷ್ಟಿತ್ತು.
ತರಕಾರಿ ಬೆಲೆಗಳು ಗಗನಮುಖಿಯಾಗಿವೆ. ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಜುಲೈನಲ್ಲಿ ಶೇ 11.3ರಷ್ಟು ಹೆಚ್ಚಳವಾಗಿದೆ. ಜುಲೈನಲ್ಲಿ ತರಕಾರಿಗಳು ಜೂನ್ ಮಟ್ಟಕ್ಕಿಂತ ಹೆಚ್ಚು ದುಬಾರಿಯಾಗಿದೆ ಎಂದು ಡೇಟಾ ತೋರಿಸುತ್ತದೆ.
ತರಕಾರಿ ಸೂಚ್ಯಂಕದಲ್ಲಿ ತಿಂಗಳಿಗೆ ಶೇ 14ರಷ್ಟು ಹೆಚ್ಚಳವು ಟೊಮೆಟೊ ಮತ್ತು ಆಲೂಗೆಡ್ಡೆಯಲ್ಲಿ ಕಂಡುಬಂದಿದೆ. ಇದಕ್ಕೆ ಮುಖ್ಯ ಕಾರಣ ಮಳೆಯಿಂದಾಗಿ ಬೆಳೆಗಳಿಗೆ ಹಾನಿಯಾಗುತ್ತಿದೆ ಎಂದು ಆಕ್ಸಿಸ್ ಕ್ಯಾಪಿಟಲ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಪೃಥ್ವಿರಾಜ್ ಶ್ರೀನಿವಾಸ್ ಹೇಳಿದ್ದಾರೆ.
ಚಿನ್ನದ ಬೆಲೆ ಏರುತ್ತಿರುವುದರಿಂದ ವೈಯಕ್ತಿಕ ಆರೈಕೆ ವಿಭಾಗದಲ್ಲಿ ಜುಲೈ ವೇಳೆಯ ಬೆಲೆಗಳು ಶೇ 13.6ರಷ್ಟು ಮತ್ತು ಜೂನ್‌ನಲ್ಲಿ ಶೇ 12.4ರಷ್ಟು ಹೆಚ್ಚಾಗಿದೆ. ವೈಯಕ್ತಿಕ ಆರೈಕೆಗಳು ಸಿಪಿಐನ ಸೂಚ್ಯಂಕದಲ್ಲಿ ಚಿನ್ನವು ಶೇ 27ರಷ್ಟು ಪಾಲು ಹೊಂದಿವೆ. ಚಿನ್ನದ ಬೆಲೆಗಳು ವರ್ಷದಿಂದ ವರ್ಷಕ್ಕೆ ಶೇ 40ರಷ್ಟು ಹೆಚ್ಚಾಗಿದೆ ಎಂದರು.
ಕೊರೊನಾ ವೈರಸ್ ಪ್ರೇರೇಪಿತ ಲಾಕ್ಡೌನ್ ಬಳಿಕ ಲಡಾಖ್ ಗಡಿಯಲ್ಲಿ ಚೀನಾ ಸೈನ್ಯದ ಆಕ್ರಮಣಶೀಲತೆ ಹಾಗೂ ಈ ನಂತರ ಉದ್ಭವಿಸಿದ ಚೀನೀ ವಿರೋಧಿ ಮನೋಭಾವ ಉಂಟಾಯಿತು. ಎಲೆಕ್ಟ್ರಾನಿಕ್ಸ್, ಸಾಬೂನು, ಶಾಂಪೂ ಮತ್ತು ವೈಯಕ್ತಿಕ ನೈರ್ಮಲ್ಯ ಉತ್ಪನ್ನಗಳಲ್ಲದೆ ವೈಯಕ್ತಿಕ ಆರೈಕೆ ಸರಕುಗಳು ಚೀನಾದಿಂದ ಸರಬರಾಜು ಆಗುತ್ತಿವೆ. ಆಮದು ಸರಪಳಿಗೆ ತೀವ್ರ ಹೊಡೆತ ಬಿತ್ತು.
ಫಾರೆಕ್ಸ್ ಮಾರುಕಟ್ಟೆಯಲ್ಲಿ ದುರ್ಬಲ ಆಗುತ್ತಿರುವ ರೂಪಾಯಿ ಕೂಡ ಎಲೆಕ್ಟ್ರಾನಿಕ್ಸ್ ಆಮದನ್ನು ದುಬಾರಿಯನ್ನಾಗಿ ಮಾಡಿದೆ. ರೂಪಾಯಿ ಮೌಲ್ಯವು ಮಾರ್ಚ್‌ನಲ್ಲಿ ಪ್ರತಿ ಡಾಲರ್ ಮೌಲ್ಯ ₹ 72 ರಿಂದ ಜುಲೈ ಅಂತ್ಯಕ್ಕೆ ₹ 75ಗೆ ಇಳಿದಿದೆ.
ಮಸಾಲೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಲಕ್ಷಣ ಹೊಂದಿವೆ. ಮನೆ ಮತ್ತು ಔಷಧೀಯ ಉದ್ಯಮಗಳಿಂದ ಹೆಚ್ಚಿನ ಬೇಡಿಕೆಯ ಹಿನ್ನೆಲೆಯಲ್ಲಿ ದುಬಾರಿಯಾಗುತ್ತಿದೆ. ಮಸಾಲೆಗಳ ಬೆಲೆ ಜುಲೈನಲ್ಲಿ ಶೇ13.3ರಷ್ಟು ಮತ್ತು ಜೂನ್‌ನಲ್ಲಿ ಶೇ 11.7ರಷ್ಟು ಹೆಚ್ಚಾಯಿತು.
ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆಗಳು ವರ್ಷದ ಹಿಂದಿನ ದರಕ್ಕೆ ಹೋಲಿಸಿದರೆ ಏರಿಕೆಯಾಗಿದ್ದು, ತತ್ಪರಿಣಾಮ ಜುಲೈನಲ್ಲಿ ಸಾರಿಗೆ ವೆಚ್ಚ ಶೇ 10ರಷ್ಟು ಹೆಚ್ಚಾಗಿದೆ. ಹೆಚ್ಚುತ್ತಿರುವ ಸಾರಿಗೆ ವೆಚ್ಚಗಳು ಇತರ ಸರಕು ಮತ್ತು ಸೇವೆಗಳ ಬೆಲೆಗಳ ಹೆಚ್ಚಳಕ್ಕೆ ಕಾರಣವಾಗಿ ಒಟ್ಟಾರೆ ಹಣದುಬ್ಬರ ಏರಿಕೆಗೆ ಪುಷ್ಟಿ ನೀಡಿದೆ.
ಇದರಿಂದಾಗಿಯೇ ಭಾರತದಲ್ಲಿ ಚಿಲ್ಲರೆ ಹಣದುಬ್ಬರವು ಜುಲೈನಲ್ಲಿ ನಿರೀಕ್ಷೆಗಿಂತ ಶೇ 6.93ಕ್ಕಿಂತ ಹೆಚ್ಚಾಗಿದೆ. ಹೆಚ್ಚಿನ ಆಹಾರ ಬೆಲೆಗಳು, ಇಂಧನ ದರ ಹೆಚ್ಚಳ ಮತ್ತು ಹೆಚ್ಚಿನ ವೇತನದ ಕಾರಣದಿಂದಾಗಿ ಹಣದುಬ್ಬರವು ಇನ್ನಷ್ಟು ಮೇಲ್ಮುಖವಾಗಲಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಸಂಶೋಧನಾ ವರದಿಯಲ್ಲಿ ಅಂದಾಜಿಸಿದೆ.