ಗುರುಗ್ರಾಮ(ಹರಿಯಾಣ): ಕೊರೊನಾ ವೈರಸ್ ಹಬ್ಬುತ್ತಿರುವ ಭೀತಿಯಿಂದಾಗಿ ದೇಶಾದ್ಯಂತ 21 ದಿನ ಲಾಕ್ಡೌನ್ ಘೋಷಿಸಲಾಗಿದೆ. ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ನಗರ ವಾಸಿಗಳಿಗಿಂತ ಹಳ್ಳಿಗರು ಮುಂದಿದ್ದಾರೆ ಎಂಬುದಕ್ಕೆ ನಿದರ್ಶನವಿದು.
ಗುರುಗ್ರಾಮ ಸಮೀಪದ ಧೋಲಾ ಗ್ರಾಮದ ಮುಖ್ಯಸ್ಥರು ಕಾರಣವಿಲ್ಲದೇ ಜನರು ತಮ್ಮ ಮನೆಗಳಿಂದ ಹೊರಬಂದರೆ 50,000 ರೂ.ಗಳ ದಂಡ ವಿಧಿಸುವುದಾಗಿ ಘೋಷಿಸಿದ್ದಾರೆ.
ಧೋಲಾ ಗ್ರಾಮವು ಸೊಹ್ನಾ ತಹಶೀಲ್ ವ್ಯಾಪ್ತಿಯಲ್ಲಿ ಬರುತ್ತದೆ. ಈ ಹಿಂದೆ 2016ರಲ್ಲಿ ಪ್ರಣವ್ ಮುಖರ್ಜಿ ಗ್ರಾಮದ ಮುಖ್ಯಸ್ಥರಾಗಿದ್ದಾಗ ಸ್ಮಾರ್ಟ್ ವಿಲೇಜ್ ಎಂಬ ಹೆಗ್ಗಳಿಕೆ ಪಡೆದಿತ್ತು. ಇದೇ ಗ್ರಾಮ ಈಗ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಾಯಿಸಿದ ಸಾಮಾಜಿಕ ಅಂತರವನ್ನು ಜಾರಿಗೆ ತರಲು ಗ್ರಾಮಸ್ಥರಿಗೆ ದಂಡ ವಿಧಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಪಂಚ್ (ಗ್ರಾಮ ಮುಖ್ಯಸ್ಥ) ಸುರ್ಜೀತ್ ರಾಘವ್ ಹೇಳಿದ್ದಾರೆ.
ಕೋವಿಡ್ -19ರ ವಿರುದ್ಧ ಹೋರಾಡಲು ನಿಷೇಧ ಆದೇಶದ ಹೊರತಾಗಿಯೂ ಕೆಲವು ಯುವಕರು ಹಳ್ಳಿಯ ಪ್ರಮುಖ ಸ್ಥಳಗಳಲ್ಲಿ ಒಟ್ಟುಗೂಡುತ್ತಿರುವುದು ಕಂಡುಬಂತು. ಇದು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹಬ್ಬುವ ವೈರಸ್ ಆಗಿದೆ. ಇದನ್ನು ತಡೆಗಟ್ಟಲು ತಪ್ಪಿತಸ್ಥರಿಗೆ ದಂಡ ವಿಧಿಸಲು ನಾವು ನಿರ್ಧರಿಸಿದ್ದೇವೆ ಎಂದರು.
ಲಾಕ್ಡೌನ್ ಅನುಷ್ಠಾನಕ್ಕೆ ನಿವಾಸಿಗಳು ಸಹಕರಿಸುತ್ತಿದ್ದಾರೆ. ನಾವು ಇನ್ನೂ ಕೆಲವು ಪ್ರಯತ್ನಗಳು ಹಾಗೂ ಸಹಕಾರವನ್ನು ನಿರೀಕ್ಷಿಸುತ್ತಿದ್ದೇವೆ. ನಿವಾಸಿಗಳು ಮನೆಯಲ್ಲಿಯೇ ಇರಬೇಕು ಎಂದು ಧ್ವನಿವರ್ಧಕಗಳ ಮೂಲಕ ಅಧಿಕಾರಿಗಳು ಘೋಷಣೆ ಮಾಡಬೇಕು ಎಂದು ಗುರುಗ್ರಾಮ ಪೊಲೀಸ್ ಆಯುಕ್ತ ಮೊಹಮದ್ ಅಖಿಲ್ ಹೇಳಿದ್ದಾರೆ.