ನವದೆಹಲಿ: ದೇಶದ ಪ್ರಗತಿ ಮತ್ತು ಆರ್ಥಿಕ ಅಭಿವೃದ್ಧಿಯ ಪಥದಲ್ಲಿ ರಫ್ತು ವಹಿವಾಟು ಒಂದು ಪ್ರಧಾನ ಭೂಮಿಕೆ ಆಗಿರುತ್ತದೆ. ಭಾರತದ 30 ರಾಜ್ಯಗಳ ಪೈಕಿ ಅಗ್ರ ಐದು ರಾಜ್ಯಗಳು ರಫ್ತಿ ವಹಿವಾಟಿನಲ್ಲಿ ಸಿಂಹಪಾಲು ಕಾಣ್ಕೆ ನೀಡುತ್ತಿವೆ. ಇದರಲ್ಲಿ ಕರ್ನಾಟಕವೂ ಸೇರಿದೆ ಎಂಬುದು ಕನ್ನಡಿಗರ ಹೆಮ್ಮೆ!
ನೀತಿ ಆಯೋಗದ ರಫ್ತು ಸನ್ನದ್ಧತೆ ಸೂಚ್ಯಂಕ 2020ರಲ್ಲಿ ಗುಜರಾತ್ ಅಗ್ರ ಸ್ಥಾನದಲ್ಲಿದ್ದು, ಮಹಾರಾಷ್ಟ್ರ ಮತ್ತು ತಮಿಳುನಾಡು ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದೆ ಎಂದು ಸರ್ಕಾರದ ಚಿಂತಕರ ಚಾವಡಿ ಬಿಡುಗಡೆ ಮಾಡಿದ ವರದಿಯಲ್ಲಿದೆ.
ವರದಿಯ ಪ್ರಕಾರ, ಆರು ಕರಾವಳಿ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಒಡಿಶಾ, ಕರ್ನಾಟಕ ಮತ್ತು ಕೇರಳ ಮೊದಲ ಹತ್ತು ಶ್ರೇಯಾಂಕಗಳಲ್ಲಿ ಸ್ಥಾನ ಪಡೆದಿವೆ. ಇವು ರಫ್ತು ಉತ್ತೇಜಿಸಲು ಬಲವಾದ ಶಕ್ತಿ ಸಾಮರ್ಥ್ಯ ಮತ್ತು ಸುಗಮಗೊಳಿಸುವಂತಹ ಅಂಶಗಳ ಉಪಸ್ಥಿತಿ ಹೊಂದಿವೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ರಾಜಸ್ಥಾನ, ತೆಲಂಗಾಣ ಮತ್ತು ಹರಿಯಾಣ ರಾಜ್ಯಗಳು ಸಹ ಅತ್ಯುತ್ತಮವಾದ ಪ್ರದರ್ಶನ ನೀಡಿವೆ.
ಹಿಮಾಲಯದ ತಪ್ಪಲು ರಾಜ್ಯಗಳ ಪೈಕಿ ಉತ್ತರಾಖಂಡ ಮೊದಲ ಸ್ಥಾನದಲ್ಲಿದ್ದು, ತ್ರಿಪುರ ಮತ್ತು ಹಿಮಾಚಲ ಪ್ರದೇಶವು ನಂತರದಲ್ಲಿವೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ದೆಹಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರೆ, ಗೋವಾ ಮತ್ತು ಚಂಡೀಗಢ ನಂತರದ ಸ್ಥಾನದಲ್ಲಿವೆ. ಛತ್ತೀಸ್‌ಗಢ ಮತ್ತು ಜಾರ್ಖಂಡ್ ರಫ್ತು ಉತ್ತೇಜಿಸಲು ಹಲವು ಕ್ರಮಗಳನ್ನು ಪ್ರಾರಂಭಿಸಿದೆ ಎಂದು ವರದಿ ಹೇಳಿದೆ.
ವರದಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್, ರಫ್ತು ವಹಿವಾಟು ಆತ್ಮನಿರ್ಭರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಜಿಡಿಪಿ ಮತ್ತು ವಿಶ್ವ ವ್ಯಾಪಾರದಲ್ಲಿ ರಫ್ತು ಪಾಲನ್ನು ಹೆಚ್ಚಿಸಲು ದೇಶವು ಶ್ರಮಿಸಬೇಕಾಗಿದೆ ಎಂದು ಕರೆಕೊಟ್ಟರು.
ಮುಂದಿನ ವರ್ಷಗಳಲ್ಲಿ ವಿಶ್ವ ವ್ಯಾಪಾರದಲ್ಲಿ ಭಾರತದ ಪಾಲನ್ನು ದ್ವಿಗುಣಗೊಳಿಸಲು ನಾವು ಪ್ರಯತ್ನಿಸುತ್ತೇವೆ. ದಕ್ಷಿಣ ಕೊರಿಯಾದ 11,900 ಡಾಲರ್ ಮತ್ತು ಚೀನಾದ 18,000 ಯುಎಸ್ ಡಾಲರ್‌ಗೆ ಹೋಲಿಸಿದರೆ ಭಾರತದ ತಲಾ ರಫ್ತು 241 ಡಾಲರ್ನಷ್ಟಿದೆ ಎಂದರು.