ನವದೆಹಲಿ:ಕೊರೊನಾ ತಂದೊಡ್ಡಿದ ಆರ್ಥಿಕ ಸಂಕಷ್ಟದಲ್ಲಿಯೂ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಆದಾಯವು ನವೆಂಬರ್‌ನಲ್ಲಿ 1.04 ಲಕ್ಷ ಕೋಟಿ ರೂ.ಗಳಷ್ಟಾಗಿದೆ. ಕಳೆದ ತಿಂಗಳಲ್ಲಿಯೂ ಸಹ 1.05 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು.
ಜಿಎಸ್‌ಟಿ ಆದಾಯವು ಪ್ರಸಕ್ತ ಹಣಕಾಸು ವರ್ಷದಲ್ಲಿ ಸತತ ಎರಡನೇ ತಿಂಗಳು ಕೂಡಾ 1 ಲಕ್ಷ ಕೋಟಿ ರೂ. ತಲುಪಿದೆ. 2019ರ ನವೆಂಬರ್ನಲ್ಲಿನ 1,03,491 ಕೋಟಿ ರೂ.ಗೆ ಹೋಲಿಸಿದರೆ 2020ರಲ್ಲಿನ ಇದೇ ತಿಂಗಳ ಸಂಗ್ರಹವು ಶೇ 1.4ರಷ್ಟು ಹೆಚ್ಚಾಗಿದೆ.
2020ರ ನವೆಂಬರ್‌ನಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ 1,04,963 ಕೋಟಿ ರೂ. ಆಗಿದೆ. ಅದರಲ್ಲಿ ಕೇಂದ್ರ ಜಿಎಸ್‌ಟಿ ಪಾಲು 19,189 ಕೋಟಿ ರೂ., ರಾಜ್ಯ ಜಿಎಸ್‌ಟಿ 25,540 ಕೋಟಿ ರೂ., ಐಜಿಎಸ್‌ಟಿ 51,992 ಕೋಟಿ ರೂ. (ಸರಕು ಆಮದಿನ ಸಂಗ್ರಹ 22,078 ಕೋಟಿ ರೂ.) ಮತ್ತು ಸೆಸ್ 8,242 ಕೋಟಿ ರೂ. (ಸರಕು ಆಮದು ಸಂಗ್ರಹ 809 ಕೋಟಿ ರೂ. ಸೇರಿ) ಆಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಜಿಎಸ್‌ಟಿ ಆದಾಯವು 2019-20ರ ಸಾಲಿನ 12 ತಿಂಗಳ ಪೈಕಿ 8 ತಿಂಗಳು ಮಾತ್ರವೇ 1 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಲಾಕ್‌ಡೌನ್ ಮತ್ತು ಆರ್ಥಿಕತೆ ಕುಸಿತದಿಂದಾಗಿ ಆದಾಯವು ಕುಸಿತ ಕಂಡಿದೆ