ಕರ್ನಾಟಕ

karnataka

ETV Bharat / business

ನಾಳೆ 40ನೇ ಜಿಎಸ್​ಟಿ ಮಂಡಳಿ ಸಭೆ: ಯಾರಿಗೆ ಸಿಗಲಿದೆ ಹಿತವಾದ ಸಿಹಿಸುದ್ದಿ?

ಲಾಕ್​ಡೌನ್​ನಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಉದ್ಯಮ ವಲಯಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಹಲವು ವಿನಾಯಿತಿ ಯೋಜನೆಗಳನ್ನು ಪ್ರಕಟಿಸಿದೆ. ನಾಳಿನ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಮತ್ತಷ್ಟು ರಿಯಾಯಿತಿ ಘೋಷಿಸುವ ಸಾಧ್ಯತೆ ಇದೆ.

GST COUNCIL
ಜಿಎಸ್​ಟಿ ಮಂಡಳಿ

By

Published : Jun 11, 2020, 10:47 PM IST

Updated : Jun 12, 2020, 6:42 AM IST

ನವದೆಹಲಿ:ಲಾಕ್​ಡೌನ್​ ಬಳಿಕದ ಪ್ರಥಮ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿಯ ಸಭೆ ನಾಳೆ (ಜೂನ್​ 12) ನಡೆಯಲಿದ್ದು, ಉದ್ಯಮ ವಲಯಕ್ಕೆ ಹಿತವಾದ ಸಮಾಚಾರ ನೀಡಲಿದೆ ಎಂದು ಹೇಳಲಾಗುತ್ತಿದೆ.

ತೆರಿಗೆ ಆದಾಯದ ಮೇಲೆ ಕೋವಿಡ್ -19ರ ಪರಿಣಾಮದ ಬಗ್ಗೆ ಕೌನ್ಸಿಲ್ ಚರ್ಚಿಸಲಿದೆ. ಇದೇ ವೇಳೆ ರಾಜ್ಯಗಳಿಗೆ ಪರಿಹಾರ ಪಾವತಿಸುವ ಚೌಕಟ್ಟನ್ನು ನಿರ್ಧರಿಸಬಹುದು ಎಂದು ಮೂಲಗಳು ತಿಳಿಸಿವೆ.

ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಮತ್ತು ರಾಜ್ಯ ಸಹವರ್ತಿಗಳನ್ನು ಒಳಗೊಂಡ ಜಿಎಸ್​ಟಿ ಕೌನ್ಸಿಲ್​ನ 40ನೇ ಸಭೆ ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆಯಲಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನದಿಂದಾಗಿ ರಾಜ್ಯಗಳಿಗೆ ಆದಾಯ ನಷ್ಟ ಸರಿದೂಗಿಸಲು ಹಣ ಸಂಗ್ರಹಿಸುವ ಮಾರ್ಗಗಳ ಬಗ್ಗೆಯೂ ಕೌನ್ಸಿಲ್​ನಲ್ಲಿ ಪ್ರಸ್ತಾಪ ಆಗಲಿದೆ.

ತೆರಿಗೆ ಸ್ಲ್ಯಾಬ್​ ದರಗಳಲ್ಲಿ ಯಾವುದೇ ಬದಲಾವಣೆಗಳು ಇಲ್ಲದಿದ್ದರೂ ಜಿಎಸ್‌ಟಿ ಅನುಷ್ಠಾನದಿಂದಾಗಿ ರಾಜ್ಯಗಳಿಗೆ ಆದಾಯ ನಷ್ಟವನ್ನು ಸರಿದೂಗಿಸಲು ಹಣವನ್ನು ಸಂಗ್ರಹಿಸುವ ಮಾರ್ಗಗಳನ್ನು ಕೌನ್ಸಿಲ್ ನಿರ್ಧರಿಸುತ್ತದೆ.

ಕೇಂದ್ರ ಮತ್ತು ರಾಜ್ಯಗಳ ಆದಾಯದ ಮೇಲೆ ಸಾಂಕ್ರಾಮಿಕ ರೋಗದ ಪರಿಣಾಮ ಮತ್ತು ಆದಾಯದ ಅಂತರಕ್ಕೆ ಕಾರಣವಾಗುವ ಮಾರ್ಗಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ನೀರಸ ಆದಾಯ ಸಂಗ್ರಹಣೆ ಮತ್ತು ರಿಟರ್ನ್ಸ್ ಸಲ್ಲಿಸಲು ವಿಸ್ತೃತ ಗಡುವು ಎದುರಿಸುತ್ತಿರುವ ಸರ್ಕಾರ, ಏಪ್ರಿಲ್ ಮತ್ತು ಮೇ ತಿಂಗಳ ಮಾಸಿಕ ಜಿಎಸ್​ಟಿ ಆದಾಯ ಸಂಗ್ರಹ ಅಂಕಿಅಂಶಗಳನ್ನು ಬಿಡುಗಡೆ ಮಾಡಲಿಲ್ಲ.

ಪರಿಹಾರಕ್ಕೆ ಬೇಕಾದ ಅವಶ್ಯಕತೆಗಳನ್ನು ಪೂರೈಸಲು ಮಾರುಕಟ್ಟೆಯಿಂದ ಸಾಲ ಪಡೆಯುವ ಕಾನೂನುಬದ್ಧತೆಯನ್ನು ಕೇಂದ್ರ ಪರಿಶೀಲಿಸುತ್ತದೆ ಎಂದು 2020ರ ಮಾರ್ಚ್ 14ರಂದು ನಡೆದ ಹಿಂದಿನ ಕೌನ್ಸಿಲ್ ಸಭೆಯಲ್ಲಿ ಸೀತಾರಾಮನ್ ಹೇಳಿದ್ದರು.

2017ರ ಆಗಸ್ಟ್​ನಿಂದ 2020ರ ಜನವರಿವರೆಗೆ ಜಿಎಸ್​ಟಿ ರಿಟರ್ನ್ಸ್ ಸಲ್ಲಿಸದಿದ್ದಕ್ಕೆ ವಿಳಂಬ ಶುಲ್ಕ ಮನ್ನಾ ಮಾಡುವ ಬಗ್ಗೆ ಕೌನ್ಸಿಲ್ ಚರ್ಚಿಸಲಿದೆ.

ರಾಜ್ಯಗಳ ಜಿಎಸ್​ಟಿ ನಷ್ಟ ಪರಿಹಾರ ಅವಧಿ ವಿಸ್ತರಣೆ ಪ್ರಸ್ತಾಪ ಸಾಧ್ಯತೆ:

ದೇಶಾದ್ಯಂತ ಜಿಎಸ್‌ಟಿ ಸಂಗ್ರಹದಲ್ಲಿನ ತೀವ್ರ ಕುಸಿತ ಮತ್ತು ಆರ್ಥಿಕ ಚಟುವಟಿಕೆಗಳ ಅಡೆತಡೆ ಎದುರಿಸುತ್ತಿರುವ ಕೇಂದ್ರ ಸರ್ಕಾರ, ತನ್ನ ಸಾಲಗಳ ಒಂದು ಭಾಗವನ್ನು ಬಳಸಿಕೊಂಡು ರಾಜ್ಯಗಳಿಗೆ ನೀಡಬೇಕಿರುವ ಜಿಎಸ್‌ಟಿ ಪರಿಹಾರವನ್ನು 6ನೇ ಅಥವಾ ನಂತರದ ವರ್ಷಗಳಲ್ಲಿ ಸೆಸ್ ಸಂಗ್ರಹದ ಮೂಲಕ ಮರುಪಾವತಿಸಲು ಚಿಂತಿಸುತ್ತಿದೆ.

ಜಿಎಸ್​ಟಿ ಕಾಯ್ದೆ ಪ್ರಕಾರ, ಜುಲೈ 2017ರಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಜಾರಿಗೆ ಬಂದ ನಂತರ ಮೊದಲ ಐದು ವರ್ಷಗಳವರೆಗೆ ಯಾವುದೇ ಆದಾಯ ನಷ್ಟಕ್ಕೆ ರಾಜ್ಯಗಳಿಗೆ ಸಂಪೂರ್ಣ ಪರಿಹಾರದ ಭರವಸೆ ನೀಡಿದೆ. ಕೇಂದ್ರ ಸರ್ಕಾರವು 2016-17 ಮೂಲ ವರ್ಷದಲ್ಲಿ ಪರಿಹಾರ ಮೊತ್ತವನ್ನು ಆದಾಯದ ಮೇಲೆ ಶೇಕಡಾ 14ಕ್ಕೆ ನಿಗದಿ ಪಡಿಸಲಾಗಿದೆ. ರಾಜ್ಯಗಳಿಗೆ ಸಂಪೂರ್ಣ ಜಿಎಸ್​ಟಿ ಪರಿಹಾರವನ್ನು 2022ರ ಹಣಕಾಸು ವರ್ಷದರವರೆಗೆ ಐದು ವರ್ಷಗಳ ಅವಧಿಗೆ ಪಾವತಿಸಬೇಕಾಗುತ್ತದೆ.

ಕಟ್-ಆಫ್ ಐದನೇ ವರ್ಷವನ್ನು ಮೀರಿ ಕನಿಷ್ಠ ಎರಡು ವರ್ಷಗಳಾದರೂ ಪರಿಹಾರ ಸೆಸ್​ನ ಸುಂಕವನ್ನು ವಿಸ್ತರಿಸಲು ಜಿಎಸ್​ಟಿ ಕೌನ್ಸಿಲ್ ಅನುಮೋದನೆ ಪಡೆಯಬೇಕು. ಹೀಗಾಗಿ, ನಾಳೆ ನಡೆಯುವ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಕ್ಕೆ ಬರಬಹುದು.

Last Updated : Jun 12, 2020, 6:42 AM IST

ABOUT THE AUTHOR

...view details