ನವದೆಹಲಿ: ಜಿಎಸ್‌ಟಿ ನಷ್ಟ ಪರಿಹಾರದ ಕೊರತೆ ನೀಗಿಸಲು ಹಣಕಾಸು ಸಚಿವಾಲಯವು 14ನೇ ಸುತ್ತಿನ ಕಂತಿನಡಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 6,000 ಕೋಟಿ ರೂ. ಬಿಡುಗಡೆ ಮಾಡಿದೆ. ಇದುವರೆಗೂ ಹಂಚಿಕೆ ಮಾಡಲಾದ ಒಟ್ಟು ಮೊತ್ತ 84,000 ಕೋಟಿ ರೂ.ಗಳಷ್ಟಾಗಿದೆ.
ಇದರಲ್ಲಿ ದೆಹಲಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಿಗೆ 5,516.6 ಕೋಟಿ ರೂ. ಹಾಗೂ ಇತರ ಮೂರು ಯುಟಿಗಳಿಗೆ 483.40 ಕೋಟಿ ರೂ. ನೀಡಲಾಗಿದೆ.
ಇಲ್ಲಿಯವರೆಗೆ ಜಿಎಸ್‌ಟಿ ಪರಿಹಾರದ ಕೊರತೆಯ ಶೇ 76ರಷ್ಟು ಈಗಾಗಲೇ ರಾಜ್ಯಗಳು ಮತ್ತು ಯುಟಿಗಳಿಗೆ ಬಿಡುಗಡೆಯಾಗಿದೆ. ಇದರಲ್ಲಿ 76,616.16 ಕೋಟಿ ರೂ. ರಾಜ್ಯಗಳಿಗೆ ಮತ್ತು 7,383.84 ಕೋಟಿ ರೂ. ಯುಟಿಗಳಿಗೆ ಹಂಚಿಕೆ ಮಾಡಲಾಗಿದೆ.
ಜಿಎಸ್‌ಟಿ ಅನುಷ್ಠಾನದಿಂದ ಉಂಟಾದ ಆದಾಯದ 1.10 ಲಕ್ಷ ಕೋಟಿ ರೂ. ಕೊರತೆ ನೀಗಿಸಲು ಕೇಂದ್ರವು 2020ರ ಅಕ್ಟೋಬರ್‌ನಲ್ಲಿ ವಿಶೇಷ ಸಾಲ ಪಡೆಯುವ ವಿಂಡೋ ಸ್ಥಾಪಿಸಿತ್ತು. ರಾಜ್ಯಗಳು ಮತ್ತು ಯುಟಿಗಳ ಪರವಾಗಿ ಕೇಂದ್ರವು ಎರವಲು ಪಡೆದು ನೀಡುತ್ತಿದೆ.
ಇದನ್ನೂ ಓದಿ: 5,052 ರೂ. ಕುಸಿದ ಬೆಳ್ಳಿ ಧಾರಣೆ: ಬಂಗಾರದ ಬೆಲೆಯಲ್ಲೂ ಭಾರಿ ಇಳಿಕೆ
ಒಟ್ಟು 84,000 ಕೋಟಿ ರೂ. ಈವರೆಗೆ ಕೇಂದ್ರವು ಸರಾಸರಿ 4.7395ರಷ್ಟು ಬಡ್ಡಿದರದಲ್ಲಿ ಎರವಲು ಪಡೆದಿದೆ. ರಾಜ್ಯಗಳು ಮತ್ತು ಯುಟಿಗಳಿಗೆ ವಿಶೇಷ ಎರವಲು ವಿಂಡೋದ ಮೂಲಕ ಹಣ ಒದಗಿಸುವುದರ ಜೊತೆಗೆ, ಒಟ್ಟು ರಾಜ್ಯಗಳ ದೇಶೀಯ ಉತ್ಪನ್ನದ (ಜಿಎಸ್‌ಡಿಪಿ) ಶೇ 0.50ಕ್ಕೆ ಸಮಾನವಾದ ಹೆಚ್ಚುವರಿ ಸಾಲ ಅನುಮತಿಯನ್ನು ಸರ್ಕಾರ ರಾಜ್ಯಗಳಿಗೆ ನೀಡಿದೆ.
14 ಸಾಪ್ತಾಹಿಕ ಹಂತಗಳಲ್ಲಿ ಸಾಲ ಮಾಡಿದ ಕೇಂದ್ರ ಸರ್ಕಾರವು ಅಕ್ಟೋಬರ್ 23, ನವೆಂಬರ್ 2, ನವೆಂಬರ್ 9, ನವೆಂಬರ್ 23, ಡಿಸೆಂಬರ್ 1, ಡಿಸೆಂಬರ್ 7, ಡಿಸೆಂಬರ್ 14, ಡಿಸೆಂಬರ್ 21, ಡಿಸೆಂಬರ್ 28, ಜನವರಿ 1, ಜ.11, ಜ.18, ಜ.25 ಮತ್ತು ಫೆಬ್ರವರಿ 3ರಂದು ರಾಜ್ಯಗಳಿಗೆ ಹಣ ಬಿಡುಗಡೆ ಮಾಡಿದೆ.