ಬೆಂಗಳೂರು :ಜಿಎಸ್‌ಟಿ ಆದಾಯ ಕೊರತೆ ನೀಗಿಸಲು ಕೇಂದ್ರವು ಎರವಲು ಪಡೆಯುವ ಎರಡು ಆಯ್ಕೆಗಳಲ್ಲಿ ಮೊದಲನೆಯದನ್ನು ಆಯ್ಕೆ ಮಾಡಲು ನಿರ್ಧರಿಸಿದೆ ಎಂದು ರಾಜ್ಯ ಬಿಜೆಪಿ ಸರ್ಕಾರ ತಿಳಿಸಿದೆ. ಮೊದಲನೆ ಆಯ್ಕೆ ಅಡಿಯಲ್ಲಿ ರಾಜ್ಯವು ಒಟ್ಟು 18,289 ಕೋಟಿ ರೂ. ಪರಿಹಾರ ಪಡೆಯಬಹುದಾಗಿದೆ.
ಈ ಕುರಿತು ಸಿಎಂ ಬಿ ಎಸ್ ಯಡಿಯುರಪ್ಪ ಅವರು ಟ್ವೀಟ್ ಮಾಡಿದ್ದು, ಜಿಎಸ್‌ಟಿ ಪರಿಹಾರದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೀಡಿದ ಎರಡು ಆಯ್ಕೆಗಳ ಮೌಲ್ಯಮಾಪನದ ನಂತರ ರಾಜ್ಯ ಸರ್ಕಾರವು ಆಯ್ಕೆ 1ರ ಅಡಿಯಲ್ಲಿ ಒಟ್ಟು 18,289 ಕೋಟಿ ರೂ. ಪರಿಹಾರ ಪಡೆಯುವ ಆಯ್ಕೆಯನ್ನು ಕರ್ನಾಟಕ ತನ್ನ ಆದ್ಯತೆಯನ್ನಾಗಿ ತೀರ್ಮಾನಿಸಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಆದಾಯ ಹೆಚ್ಚಳಕ್ಕೆ ಇದು ಸಹಕಾರಿಯಾಗಲಿದೆ ಎಂದು ಬರೆದುಕೊಂಡಿದ್ದಾರೆ.
ಹಣಕಾಸು ಖಾತೆ ಹೊಂದಿರುವ ಯಡಿಯೂರಪ್ಪ ಅವರು ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಎರಡೂ ಆಯ್ಕೆಗಳ ಮೌಲ್ಯಮಾಪನದ ನಂತರ ಆಯ್ಕೆ 1 ರಾಜ್ಯದ ಹಣಕಾಸುಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಭಾವಿಸಲಾಗಿದೆ. ಆದ್ದರಿಂದ ಕರ್ನಾಟಕ ಸರ್ಕಾರವು ಆಯ್ಕೆ 1ಕ್ಕೆ ಆದ್ಯತೆ ನೀಡುವ ಭಾರತ ಸರ್ಕಾರಕ್ಕೆ ತಿಳಿಸಲು ನಿರ್ಧರಿಸಿದೆ ಪ್ರಕಟಣೆ ತಿಳಿಸಿದ್ದಾರೆ.
ಆಯ್ಕೆ 1ರ ಅಡಿಯಲ್ಲಿ ಕರ್ನಾಟಕವು ಒಟ್ಟು 18,289 ಕೋಟಿ ರೂ. ಪರಿಹಾರಕ್ಕೆ ಅರ್ಹವಾಗಲಿದೆ. ಅದರಲ್ಲಿ 6,965 ಕೋಟಿ ರೂ. ಸೆಸ್ ಮೂಲಕ ಬರಲಿದೆ. ಬಾಕಿ ಇರುವ 11,324 ಕೋಟಿ ರೂ.ಗಳಿಗೆ, ರಾಜ್ಯವು ವಿಶೇಷ ಗವಾಕ್ಷಿ ಮೂಲಕ ಸಾಲ ಪಡೆಯಲು ಸಾಧ್ಯವಾಗುತ್ತದೆ. ಭವಿಷ್ಯದಲ್ಲಿ ಪರಿಹಾರ ಸೆಸ್ ನಿಧಿಯಿಂದ ಅಸಲು ಮತ್ತು ಬಡ್ಡಿ ಮರುಪಾವತಿಯ ಸಂಪೂರ್ಣ ಹೊರೆಯನ್ನು ಪೂರೈಸಲಾಗುತ್ತದೆ ಎಂದು ಹೇಳಿದೆ.