ನವದೆಹಲಿ: ಕೊರೊನಾ ನಿರ್ಬಂಧಗಳ ಸಡಿಲಿಕೆ ಪರಿಣಾಮ ಜಿಎಸ್‌ಟಿ ಸಂಗ್ರಹ 2021ರ ಜುಲೈನಲ್ಲಿ 1 ಲಕ್ಷ ಕೋಟಿ ರೂಪಾಯಿಗೆ ಏರಿಕೆ ಕಂಡಿದೆ. ಇದು ಆರ್ಥಿಕತೆ ವೇಗವಾಗಿ ಚೇತರಿಸಿಕೊಳ್ಳುತ್ತಿರುವ ಸಂಕೇತವಾಗಿದೆ.
ಮುಂದಿನ ತಿಂಗಳುಗಳಲ್ಲಿಯೂ ಸಹ ಜಿಎಸ್‌ಟಿ ಸಂಗ್ರಹ ಉತ್ತಮ ರೀತಿಯಲ್ಲಿ ಮುಂದುವರಿಯುವ ಸಾಧ್ಯತೆಗಳಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ. ಜುಲೈನಲ್ಲಿ ಒಟ್ಟು 1.16 ಲಕ್ಷ ಕೋಟಿಗಳಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯವನ್ನು ಸಂಗ್ರಹಿಸಲಾಗಿದೆ.
ಅದರಲ್ಲಿ ಸಿಜಿಎಸ್‌ಟಿ 22,197 ಕೋಟಿ ರೂ., ಎಸ್‌ಜಿಎಸ್‌ಟಿ 28,541 ಕೋಟಿ ರೂ., ಐಜಿಎಸ್‌ಟಿ 57,864 ಕೋಟಿ ಮತ್ತು ಸೆಸ್ 7,790 ಕೋಟಿ ರೂ. ಸರಕುಗಳ ಆಮದು), ಹಣಕಾಸು ಸಚಿವಾಲಯ ಭಾನುವಾರ ತಿಳಿಸಿದೆ. ಈ ಅಂಕಿ-ಅಂಶಗಳು ಜುಲೈ 1, 2021ರಿಂದ ಜುಲೈ 31, 2021ರ ನಡುವೆ ಸಲ್ಲಿಸಿದ ಜಿಎಸ್‌ಟಿಆರ್-3ಬಿ ರಿಟರ್ನ್ಸ್‌ನಿಂದ ಪಡೆದ ಜಿಎಸ್‌ಟಿ ಸಂಗ್ರಹವನ್ನು ಒಳಗೊಂಡಿವೆ ಜೊತೆಗೆ ಅದೇ ಅವಧಿಗೆ ಆಮದುಗಳಿಂದ ಸಂಗ್ರಹಿಸಿದ ಐಜಿಎಸ್‌ಟಿ ಮತ್ತು ಸೆಸ್ ಅನ್ನು ಒಳಗೊಂಡಿದೆ.
ಜುಲೈ 1 ರಿಂದ ಜುಲೈ 5, 2021ರ ನಡುವೆ ಸಲ್ಲಿಸಿದ ರಿಟರ್ನ್ಸ್‌ಗಾಗಿ 4,937 ಕೋಟಿ ರೂ.ಗಳ ಜಿಎಸ್‌ಟಿ ಸಂಗ್ರಹವನ್ನು ಸಹ ಜೂನ್ 2021ರ ಜಿಎಸ್‌ಟಿ ಸಂಗ್ರಹದಲ್ಲಿ ಸೇರಿಸಲಾಗಿದೆ. "ಕೋವಿಡ್ ನಿರ್ಬಂಧಗಳನ್ನು ಸರಾಗಗೊಳಿಸುವ ಮೂಲಕ ಜುಲೈ 2021ಕ್ಕೆ ಜಿಎಸ್‌ಟಿ ಸಂಗ್ರಹವು ಮತ್ತೆ ರೂ. 1ಲಕ್ಷ ಕೋಟಿಗೇರಿದ್ದು, ಇದು ಆರ್ಥಿಕತೆಯು ವೇಗವಾಗಿ ಚೇತರಿಸಿಕೊಳ್ಳುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಮುಂಬರುವ ತಿಂಗಳುಗಳಲ್ಲಿಯೂ ಜಿಎಸ್‌ಟಿ ಆದಾಯ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.