ನವದೆಹಲಿ: ಜೋಕರ್ ಸ್ಟ್ಯಾಶ್‌ನಡಿ ಭಾರತೀಯ ಬ್ಯಾಂಕ್ಗಳಿಗೆ ಸೇರಿರುವ ಸುಮಾರು 4,61,976 ಪಾವತಿ ಕಾರ್ಡ್ ದಾಖಲೆಗಳ ಡೇಟಾಬೇಸ್ ಅನ್ನು ಡಾರ್ಕ್ ವೆಬ್‌ನಲ್ಲಿ ಸೋರಿಕೆ ಮಾಡಲಾಗಿದೆ ಎಂದು ಸಿಂಗಾಪೂರ್ ಮೂಲದ ಗ್ರೂಪ್-ಐಬಿ ವರದಿ ಮಾಡಿದೆ.
ಸೈಬರ್ ದಾಳಿ ತಡೆಗಟ್ಟುವಲ್ಲಿ ಪರಿಣತಿ ಹೊಂದಿದ ಸಿಂಗಾಪುರ ಮೂಲದ ಸೈಬರ್ ಸೆಕ್ಯುರಿಟಿ ಕಂಪನಿಯಾದ ಗ್ರೂಪ್-ಐಬಿ, ಭಾರತೀಯ ಕಾರ್ಡ್ದಾರರಿಗೆ ಸಂಬಂಧಿಸಿದ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದೆ. ಮಾರಾಟದಲ್ಲಿರುವ ಡೇಟಾ ಬೇಸ್ನಲ್ಲಿ ಶೇ 98ಕ್ಕಿಂತಲೂ ಅಧಿಕ ಮಾಹಿತಿ ಭಾರತೀಯ ಬ್ಯಾಂಕ್ಗಳು ವಿತರಿಸಿದ ಕಾರ್ಡ್‌ಗಳದ್ದೇ ಇದೆ ಎಂದು ಹೇಳಿದೆ.
ಕಾರ್ಡ್ ದಾಖಲೆಗಳನ್ನು ಫೆಬ್ರವರಿ 5ರಂದು ಅಪ್‌ಲೋಡ್ ಮಾಡಲಾಗಿದೆ. ಇದರ ಒಟ್ಟು ಅಂದಾಜು ಮೌಲ್ಯ 4.2 ಮಿಲಿಯನ್ ಡಾಲರ್ (30 ಕೋಟಿ ರೂ., ಪ್ರತಿ ಕಾರ್ಡ್ ಬೆಲೆ 650 ರೂ.ಯಷ್ಟು ಆಗಲಿದೆ) ನಷ್ಟಿದೆ. ನಿನ್ನೆ ಬೆಳಿಗ್ಗೆ ತನಕ 16 ಕಾರ್ಡ್‌ಗಳ ವಿವರಗಳು ಮಾರಾಟವಾಗಿರುವುದು ಕಂಡುಬಂದಿದೆ. ಕಾರ್ಡ್‌ಗಳ ಮಾಹಿತಿ ಖರೀದಿಸುವವರು ವಂಚನೆ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಗ್ರೂಪ್- ಐಬಿ ತಿಳಿಸಿದೆ.
ಈಗಾಗಲೇ ಗ್ರೂಪ್ ಐಬಿ, ಭಾರತದ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡಕ್ಕೆ (ಸಿಇಆರ್ಟಿ-ಇನ್) ಈ ಬಗ್ಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಭಾರತದಲ್ಲಿ ಡಿಜಿಟಲ್ ಪಾವತಿಗಳ ಏರಿಕೆ ಮತ್ತು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪಾವತಿ ಕಾರ್ಡ್‌ಗಳನ್ನು ಸುರಕ್ಷಿತವಾಗಿ ಬಳಸುವ ಅರಿವಿನ ಕೊರತೆಯಿದೆ. ಹೀಗಾಗಿಯೇ ಭಾರತೀಯ ಮೂಲದ ಪಾವತಿ ಕಾರ್ಡ್‌ಗಳ ಮಾಹಿತಿ ಸೋರಿಕೆಯು ಪ್ರಮುಖ ಆಕರ್ಷಣೆಯಾಗಿದೆ.
ಗ್ರೂಪ್-ಐಬಿ ಪ್ರಕಾರ, ಕಾರ್ಡ್ ಸಂಖ್ಯೆಗಳು, ಮುಕ್ತಾಯ ದಿನಾಂಕಗಳು, ಸಿವಿವಿ / ಸಿವಿಸಿ ಕೋಡ್‌ಗಳು, ಕಾರ್ಡ್‌ದಾರರ ಪೂರ್ಣ ಹೆಸರು, ಅವರ ಇಮೇಲ್‌ಗಳು, ಫೋನ್ ಸಂಖ್ಯೆಗಳು ಮತ್ತು ವಿಳಾಸಗಳಂತಹ ಕೆಲವು ಹೆಚ್ಚುವರಿ ಮಾಹಿತಿ ಸಹ ಸೋರಿಕೆಯಲ್ಲಿದೆ ಎಂದು ವಿವರಿಸಿದೆ.
ಫೆಬ್ರವರಿ 5ರಂದು “INDIA-BIG-MIX” ಹೆಸರಿನಡಿ (full name: [CC] INDIA-BIG-MIX (FRESH SNIFFED CVV) INDIA/EU/WORLD MIX, HIGH VALID 80-85%, 2020-02 (NON-REFUNDABLE BASE) ಅತ್ಯಂತ ಜನಪ್ರಿಯ ಭೂಗತ ಕಾರ್ಡ್‌ಶಾಪ್‌ಗಳಲ್ಲಿ ಒಂದಾದ ಜೋಕರ್ ಸ್ಟ್ಯಾಶ್‌ನಲ್ಲಿ ಮಾರಾಟವಾಯಿತು ಎಂದು ಅಪ್‌ಲೋಡ್ ಆಗಿದೆ.