ನವದೆಹಲಿ: 'ಆತ್ಮನಿರ್ಭರ ಭಾರತ' ಮತ್ತು 'ಡಿಜಿಟಲ್ ಇಂಡಿಯಾ'ದಡಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ಸಹಭಾಗಿತ್ವದಡಿ ರುಪೇ ಪ್ಲಾಟ್‌ಫಾರ್ಮ್‌ನಲ್ಲಿ ಕಾಂಟ್ಯಾಕ್ಟ್ಲೆಸ್ ಕ್ರೆಡಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿದ್ದಾರೆ.
ಕಾರ್ಡ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, 2021ರ ಅಂತ್ಯದ ವೇಳೆಗೆ ಈ ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ 3 ಕೋಟಿ ತಲುಪುವ ಗುರಿ ಇರಿಸಿಕೊಂಡಿದ್ದೇವೆ. ಮುಂದಿನ ಡಿಸೆಂಬರ್ ತನಕ ಎಸ್‌ಬಿಐ ಕಾರ್ಡ್ ಕನಿಷ್ಠ 3 ಕೋಟಿ ಗ್ರಾಹಕರನ್ನು ತಲುಪಬೇಕು. ಅಂದೇ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನವಾಗಲಿದೆ ಎಂದರು.
ಪ್ರತಿ 15 ದಿನಗಳಿಗೆ ಒಮ್ಮೆ ಪರಿಶೀಲನಾ ವರದಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತೇನೆ. ಅದರ ಪ್ರಗತಿಯನ್ನು ಪಡೆಯಲು ತಿಂಗಳಲ್ಲಿ ಒಂದು ಸಭೆ ನಡೆಸುತ್ತೇನೆ ಎಂದು ಹೇಳಿದರು.
ಪ್ರತಿ ವರ್ಷ ಐಆರ್ಸಿಟಿಸಿಯಿಂದ 30 ಮಿಲಿಯನ್ ಟಿಕೆಟ್ಗಳನ್ನು ಬುಕ್ ಮಾಡಲಾಗಿದೆ. ಶೇ 10ರಷ್ಟು ಜನರ ಕ್ರೆಡಿಟ್ ಕಾರ್ಡ್ ಬಳಕೆಯ 3 ಕೋಟಿ ಜನರಿಗೆ ತಲುಪುವುದು ದೊಡ್ಡ ಗುರಿಯಲ್ಲ. ಐಆರ್‌ಸಿಟಿಸಿ-ಎಸ್‌ಬಿಐ ಕ್ರೆಡಿಟ್ ಕಾರ್ಡ್ ಜಂಟಿಯಾಗಿ ರೈಲ್ವೆ ಕೈಗೆತ್ತಿಕೊಂಡ ಮೇಕ್-ಇನ್-ಇಂಡಿಯಾ ಅಭಿಯಾನದ ಉಪಕ್ರಮವಾಗಿದೆ. ಇದು ಗ್ರಾಹಕರಿಗೆ ಸುರಕ್ಷಿತ ವಹಿವಾಟು ವಾತಾವರಣ ಒದಗಿಸುತ್ತದೆ. ನಿಯರ್ ಫೀಲ್ಡ್ ಕಮ್ಯುನಿಕೇಷನ್ (ಎನ್‌ಎಫ್‌ಸಿ) ತಂತ್ರಜ್ಞಾನ ಹೊಂದಿದ್ದು, ಬಳಕೆದಾರರು ಸುರಕ್ಷಿತ ರೀಡರ್ ಟ್ಯಾಪ್ ಮೂಲಕ ತಮ್ಮ ವಹಿವಾಟುಗಳನ್ನು ತ್ವರಿತಗೊಳಿಸಬಹುದು ಎಂದರು.