ನವದೆಹಲಿ: 2024-25ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಗುರಿಯನ್ನು ಸರ್ಕಾರ ಬಿಟ್ಟುಕೊಡುವುದಿಲ್ಲ. ಮೂಲಸೌಕರ್ಯ ಕ್ಷೇತ್ರಕ್ಕೆ ಒತ್ತು ನೀಡಿ 2021-22ರ ಬಜೆಟ್ನಲ್ಲಿ ಕೈಗೊಂಡ ಇತರ ಉಪಕ್ರಮಗಳು ಗುರಿ ಸಾಧಿಸಲು ನೆರವಾಗಲಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಮಂಡಿಸಿದ್ದ ಬಜೆಟ್ನಲ್ಲಿ ಮೂಲಸೌಕರ್ಯ ಖರ್ಚು, ಆಸ್ತಿ ಹಣಗಳಿಕೆ, ಆರೋಗ್ಯ ಕ್ಷೇತ್ರ ಮತ್ತು ಕೃಷಿ ಕ್ಷೇತ್ರದಲ್ಲಿ ಸಾಮರ್ಥ್ಯ ಹೆಚ್ಚಾಗಲು ಒಂದು ದೊಡ್ಡ ಉತ್ತೇಜಕ ನೀಡಿದ್ದರು. ಈ ಉಪಕ್ರಮಗಳು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಹಾನಿಗೊಳಗಾದ ಆರ್ಥಿಕತೆ ಪುನರುಜ್ಜೀವನಗೊಳಿಸುವ ಗುರಿ ಹೊಂದಿವೆ.
ನಾವು ಗುರಿಯನ್ನು ಪರಿಷ್ಕರಿಸಿಲ್ಲ. ನಾವು ಅದಕ್ಕಾಗಿ ಶ್ರಮಿಸುತ್ತಿದ್ದೇವೆ. ಮೂಲಸೌಕರ್ಯಗಳಿಗೆ ಒತ್ತು ನೀಡುವುದು ಸೇರಿದಂತೆ ಸರ್ಕಾರದ ವಿವಿಧ ಉಪಕ್ರಮಗಳು ಆ ಗುರಿಯನ್ನು ಸಾಧಿಸುವ ಮಿಷನ್ ಹೊಂದಿದೆ ಎಂದು ಬಜಾಜ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
2020-21ರ ಬಜೆಟ್ ಅಂದಾಜಿನಲ್ಲಿ ಮೂಲಸೌಕರ್ಯ ಖರ್ಚು 4.12 ಲಕ್ಷ ಕೋಟಿಯಿಂದ 5.54 ಲಕ್ಷ ಕೋಟಿ ರೂ.ಗೆ ಏರಿದರೆ, ಆರೋಗ್ಯ ಕ್ಷೇತ್ರದಲ್ಲಿ 94,000 ಕೋಟಿ ರೂ.ಗಳಿಂದ 2.23 ಲಕ್ಷ ಕೋಟಿ ರೂ.ಗೆ ತಲುಪಿದೆ.
2024-25ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡುವ ಗುರಿ ಇರಿಸಿಕೊಂಡಿದ್ದಾಗಿ 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಒಂದು ವೇಳೆ, ಇದು ಸಾಕಾರವಾದರೇ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಲಿದೆ ಎಂದು ಅವರು ಪ್ರತಿಪಾದಿಸಿದರು.