ಬೆಂಗಳೂರು: ರಾಜ್ಯದಲ್ಲಿನ ಜನೌಷಧಿ ಅಂಗಡಿಗಳಿಗೆ ಔಷಧ ಪೂರೈಕೆಯನ್ನು ಇನ್ನಷ್ಟು ತ್ವರಿತಗೊಳಿಸಲು ಇನ್ನೂ ಎರಡು ವಿತರಣಾ ಕೇಂದ್ರಗಳಿಗೆ ಅನುಮತಿ ನೀಡಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಜನೌಷಧಿ ಅಂಗಡಿಕಾರರೊಂದಿಗೆ ಸಭೆ ನಡೆಸಿ ಅವರ ಕುಂದು-ಕೊರತೆ, ಬೇಡಿಕೆಗಳನ್ನು ಆಲಿಸಿದರು. ರಾಜ್ಯದಲ್ಲಿ ಜನೌಷಧಿ ಸರಬರಾಜು ಮತ್ತು ಮಾರಾಟದ ವ್ಯವಸ್ಥೆ ಬಲಪಡಿಸಲು ಹಾಗೂ ಜನೌಷಧಿ ಬಳಕೆ ಜನಪ್ರಿಯಗೊಳಿಸುವ ಬಗ್ಗೆ ಚರ್ಚಿಸಿದರು.
ಈಗಾಗಲೇ ಬೆಂಗಳೂರು ಮತ್ತು ಮೈಸೂರಿನಲ್ಲಿ ಜನೌಷಧಿ ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕ ರಾಜ್ಯ ಸಹಕಾರಿ ಮಾರುಕಟ್ಟೆ ಒಕ್ಕೂಟಕ್ಕೆ ಹುಬ್ಬಳ್ಳಿಯಲ್ಲಿ ಜನೌಷಧ ವಿತರಣಾ ಕೇಂದ್ರ ಆರಂಭಿಸಲು ಲೈಸನ್ಸ್ ನೀಡಲಾಗಿದ್ದು, ಅದು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಕಲ್ಯಾಣ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ವಿತರಣಾ ಕೇಂದ್ರಗಳನ್ನು ಆರಂಭಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದರು.
ಶ್ರೀಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಔಷಧ ಪೂರೈಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕಳಕಳಿ. ಬಿಜೆಪಿ ಸರ್ಕಾರ ಬಂದಾಗಿನಿಂದ ದೇಶಾದ್ಯಂತ 7,000ಕ್ಕಿಂತ ಹೆಚ್ಚು ಜನೌಷಧ ಕೇಂದ್ರಗಳನ್ನು ಆರಂಭಿಸಲಾಗಿದೆ. ರಾಜ್ಯದಲ್ಲಿ ಇದುವರೆಗೆ 849 ಜನೌಷಧಿ ಅಂಗಡಿಗಳನ್ನು ತೆರೆಯಲಾಗಿದ್ದು, ಈ ವರ್ಷ 125 ಕೋಟಿ ರೂಪಾಯಿ ಮಿಕ್ಕಿ ವಹಿವಾಟು ನಡೆಯಲಿದೆ. ನಾಡಿನ ಮೂಲೆಮೂಲೆಯಲ್ಲಿಯೂ ಜನೌಷಧ ಜನಪ್ರಿಯಗೊಳಿಸಬೇಕಿದೆ. ಸರ್ಕಾರಿ ಆಸ್ಪತ್ರೆ ಇರುವಲ್ಲೆಲ್ಲ ಜನೌಷಧಿ ಕೇಂದ್ರ ಇರಬೇಕು ಎಂಬುದು ನಮ್ಮ ಉದ್ದೇಶ. ಕನಿಷ್ಠ ಪಕ್ಷ ಸರ್ಕಾರಿ ವೈದ್ಯರಾದರೂ ಬ್ರಾಂಡೆಡ್ ಔಷಧಗಳ ಬದಲಿಗೆ ಜನೌಷಧಿಯನ್ನೇ ಬರೆದು ಕೊಡುವಂತಾಗಬೇಕು. ಇದರಿಂದ ಬಡವರಿಗೆ ದೊಡ್ಡಮಟ್ಟದಲ್ಲಿ ಹಣದ ಉಳಿತಾಯವಾಗುತ್ತದೆ. ಇದರಲ್ಲಿ ರಾಜ್ಯ ಸರ್ಕಾರಗಳ ಸಹಕಾರ ಬಹುಮುಖ್ಯ. ಇವೆಲ್ಲ ವಿಷಯಗಳ ಬಗ್ಗೆ ರಾಜ್ಯ ಆರೋಗ್ಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಶೀಘ್ರವೇ ಸಭೆ ನಡೆಸಲಾಗುವುದು ಎಂದು ಹೇಳಿದರು.