ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದಿಂದ ತತ್ತರಿಸಿರುವ ಆರ್ಥಿಕ ಬೆಳವಣಿಗೆ ವೃದ್ಧಿಸುವ ತುರ್ತು ಅಗತ್ಯತೆಯ ಮಧ್ಯೆ 2021-22ರ ವಾರ್ಷಿಕ ಬಜೆಟ್ ಸಿದ್ಧಪಡಿಸುವ ಕಾರ್ಯವನ್ನು ಹಣಕಾಸು ಸಚಿವಾಲಯ ಶುಕ್ರವಾರ ಪ್ರಾರಂಭಿಸಿದೆ.
ಮುಂಬರುವ ಬಜೆಟ್ ದೇಶಕ್ಕೆ ನಿರ್ಣಾಯಕವಾಗಲಿದೆ. ಆದಾಯ ಸಂಗ್ರಹ, ಹೂಡಿಕೆ, ಖರ್ಚು, ರಫ್ತು ಮತ್ತು ಆಹಾರ ಬೆಲೆಗಳು ಸೇರಿದಂತೆ ಆರ್ಥಿಕತೆಯ ಎಲ್ಲ ವಿಭಾಗಗಳ ಮೇಲೆ ಪರಿಣಾಮ ಬೀರಿದ ಸಾಂಕ್ರಾಮಿಕ ರೋಗದ ಪರಿಣಾಮ ಎದುರಿಸಬೇಕಾಗುತ್ತದೆ.
ಐಎಂಎಫ್ ಮುನ್ಸೂಚನೆಯ ಪ್ರಕಾರ, ಈ ವರ್ಷ ಆರ್ಥಿಕತೆಯು ಶೇ 10.3ರಷ್ಟು ಭಾರಿ ಪ್ರಮಾಣದಲ್ಲಿ ಸಂಕುಚಿತಗೊಳ್ಳುವ ನಿರೀಕ್ಷೆಯಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆ ಶೇ 9.5ರಷ್ಟು ಕುಗ್ಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಂದಾಜಿಸಿದೆ.
ಹಣಕಾಸು ಸಚಿವಾಲಯದ ವೇಳಾಪಟ್ಟಿಯ ಪ್ರಕಾರ, 2020-21ರ ಪರಿಷ್ಕೃತ ಅಂದಾಜು (ಆರ್‌ಇ) ಮತ್ತು 2021-22ರ ಬಜೆಟ್ ಅಂದಾಜು (ಬಿಇ) ಅನ್ನು ಅಂತಿಮಗೊಳಿಸಲು ಸುಮಾರು ಒಂದು ತಿಂಗಳ ಸುದೀರ್ಘ ಕಾರ್ಯವು ಶುಕ್ರವಾರದಿಂದ ಪ್ರಾರಂಭವಾಯಿತು. ಬಜೆಟ್ ಸಂಬಂಧಿತ ಸರಣಿ ಸಭೆಗಳು ನವೆಂಬರ್ 12ರಂದು ಮುಕ್ತಾಯಗೊಳ್ಳಲಿವೆ.