ಹೈದರಾಬಾದ್: ಶಸ್ತ್ರಚಿಕಿತ್ಸಾ ಮಾಸ್ಕ್ ಮತ್ತು ವೈದ್ಯಕೀಯ ಗಾಗಲ್ ಸೇರಿದಂತೆ ಇನ್ನೂ ಕೆಲವು ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ರಫ್ತಿಗೆ ಅನುಮತಿ ನೀಡಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.
ಬುಧವಾರ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ 2 ಮತ್ತು 3-ಪ್ಲೈ ಸರ್ಜಿಕಲ್ ಮಾಸ್ಕ್ ಮತ್ತು ವೈದ್ಯಕೀಯ ಕನ್ನಡಕಗಳನ್ನು ಈಗ ನಿರ್ಬಂಧಗಳ ಜತೆ ರಫ್ತು ಮಾಡಬಹುದು ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ) ಹೇಳಿದೆ. ಇದಕ್ಕೂ ಮೊದಲು ಇವುಗಳನ್ನು ‘ನಿಷೇಧಿತ’ ರಫ್ತು ವಿಭಾಗದಲ್ಲಿ ಇರಿಸಲಾಗಿತ್ತು.
ಎನ್ -95 ಮಾಸ್ಕ್ ಮೇಲಿನ ನಿಷೇಧವನ್ನು ಸರ್ಕಾರ ಇನ್ನೂ ಉಳಿಸಿಕೊಂಡಿದೆ. ಹತ್ತಿ, ಉಣ್ಣೆ, ರೇಷ್ಮೆ, ಪಾಲಿಯೆಸ್ಟರ್, ವಿಸ್ಕೋಸ್ ಇತ್ಯಾದಿಗಳಿಂದ ಮಾಡಿದ ಶಸ್ತ್ರಚಿಕಿತ್ಸೆಯಲ್ಲದ ಮತ್ತು ವೈದ್ಯಕೀಯೇತರ ಮಾಸ್ಕ್ ರಫ್ತಿಗೆ ಮೇ ತಿಂಗಳಲ್ಲಿ ಅನುಮತಿ ನೀಡಲಾಯಿತು. 2 ಮತ್ತು 3-ಪ್ಲೈ ಸರ್ಜಿಕಲ್ ಮಾಸ್ಕ್ಗಳಿಗೆ ಡಿಜಿಎಫ್‌ಟಿ ಮಾಸಿಕ ರಫ್ತು ಕೋಟಾ 4 ಕೋಟಿ ನಿಗದಿಪಡಿಸಿದೆ. ಒಂದು ತಿಂಗಳಲ್ಲಿ 20 ಲಕ್ಷ ಯುನಿಟ್ ವೈದ್ಯಕೀಯ ಕನ್ನಡಕಗಳನ್ನು ರಫ್ತು ಮಾಡಬಹುದು.
ಫೇಸ್ ಶೀಲ್ಡ್ಗಳನ್ನು ದೇಶದಿಂದ ರಫ್ತು ಮಾಡುವ ನಿಷೇಧವನ್ನೂ ಸರ್ಕಾರ ತೆಗೆದುಹಾಕಿದೆ. ವೈದ್ಯಕೀಯ ಕವಚಗಳಾದ ಸರ್ಜಿಕಲ್ ಡ್ರಾಪ್ಸ್, ಐಸೊಲೇಷನ್ ಎಪ್ರಾನ್, ಸರ್ಜಿಕಲ್ ಹೊದಿಕೆ ಮತ್ತು ಎಕ್ಸರೆ ನಿಲುವಂಗಿಗಳನ್ನು ಸಹ ಈಗ ಮುಕ್ತವಾಗಿ ರಫ್ತು ಮಾಡಬಹುದಾಗಿದೆ.