ನವದೆಹಲಿ: ಸಾಂಕ್ರಾಮಿಕ ಪ್ರೇರಿತ ಆಘಾತದಿಂದ ಭಾರತದ ಆರ್ಥಿಕತೆ ಹೊರಬರುತ್ತಿದ್ದು, ಜಿಡಿಪಿ ಬೆಳವಣಿಗೆ ಈ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಸಕಾರಾತ್ಮಕ ವಲಯ ಪ್ರವೇಶಿಸಲಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕೇಂದ್ರದ ನೂತನ ಕೃಷಿ ಸುಧಾರಣಾ ಕಾಯ್ದೆಗಳು ಕೃಷಿಕರ ಆದಾಯ ಹೆಚ್ಚಿಸುವ ಗುರಿ ಹೊಂದಿವೆ. ಈ ಆಂದೋಲನವು ತಪ್ಪು ಗ್ರಹಿಕೆ ಮತ್ತು ಅಪಪ್ರಚಾರದ ಸಂವಹನದ ಪರಿಣಾಮವಾಗಿ ನಡೆಯುತ್ತಿದ್ದು, ಇದನ್ನು ತೆಗೆದು ಹಾಕಬೇಕಿದೆ ಎಂದರು.
ಎರಡನೇ ತ್ರೈಮಾಸಿಕದ ಜಿಡಿಪಿ ಅಂಕಿ-ಅಂಶಗಳು (ಶೇ7.5ರ ಸಂಕೋಚನ) ಸಾಂಕ್ರಾಮಿಕ ಪ್ರೇರಿತ ಕುಸಿತದ ಹಂತದಿಂದ ಆರ್ಥಿಕತೆಯು ಹೊರಬರುತ್ತಿದೆ ಎಂಬುದನ್ನು ಪ್ರತಿ ಬಿಂಬಿಸುತ್ತದೆ. ಮೂರನೇ ತ್ರೈಮಾಸಿಕದಲ್ಲಿ ನಾವು ವರ್ಷದ ಹಿಂದಿನ ಆರ್ಥಿಕ ಚಟುವಟಿಕೆಯನ್ನು ಸಾಧಿಸುತ್ತೇವೆ ಎಂಬುದು ನನ್ನ ನಿರೀಕ್ಷೆ ಎಂದು ಕುಮಾರ್ ಹೇಳಿದರು.