ಒಸಾಕಾ: ಪ್ರಧಾನಿ ನರೇಂದ್ರ ಮೋದಿ ಅವರು ಜಿ 20 ಶೃಂಗಸಭೆ ಪ್ರಯುಕ್ತ ಗುರುವಾರ ಜಪಾನ್ಗೆ ಆಗಮಿಸಿದ್ದು, ಸಾಗರೋತ್ತರದ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು.
'ಭಾರತೀಯರು ನನ್ನ ಮೇಲೆ ನಂಬಿಕೆ ಇಟ್ಟು ಮತ್ತೊಮ್ಮೆ ಅಧಿಕಾರ ನೀಡಿದ್ದು, ನನ್ನ ಹೊಣೆಗಾರಿಕೆಯನ್ನು ಹೆಚ್ಚಿಸಿದ್ದಾರೆ. ಭಾರತದ ಆರ್ಥಿಕತೆ ₹ 345 ಲಕ್ಷ ಕೋಟಿ (5 ಟ್ರಿಲಿಯನ್ ಡಾಲರ್) ತಲುಪಲು ಜಪಾನ್ ಕೂಡ ನೆರವಾಗಿದೆ. ಕಾರು ತಯಾರಿಕೆಯ ಒಪ್ಪಂದಿದ ಆರಂಭಗೊಂಡ ಜಪಾನ್- ಭಾರತ ಸಹಕಾರ ಬುಲೆಟ್ ಟ್ರೇನ್ ತಯಾರಿಕೆವರೆಗೂ ಬಂದು ನಿಂತಿದೆ. ದಶಕಗಳಿಂದಲೂ ಜಪಾನ್, ಭಾರತದ ಅಭಿವೃದ್ಧಿಯ ಪಾಲುಗಾರಿಕೆಯ ಭಾಗವಾಗಿದೆ' ಎಂದು ಹೇಳಿದರು.
ಚಂದ್ರಯಾನ-2 ಉಡಾವಣೆಗೆ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ಪ್ರಥಮ ಯೋಜನೆ ಶೀಘ್ರದಲ್ಲೇ ಕೈಗೂಡಲಿದೆ. ಬಾಹ್ಯಾಕಾಶ ತಂತ್ರಜ್ಞಾನ ಬೆಳವಣಿಗೆಯನ್ನು ಭಾರತ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಪ್ರಧಾನಿ ಹೇಳಿದರು.
ಸ್ವಾಮಿ ವಿವೇಕಾನಂದ, ಗುರುದೇವ್ ರವೀಂದ್ರನಾಥ್ ಟ್ಯಾಗೋರ್, ಮಹಾತ್ಮ ಗಾಂಧಿಜೀ, ನೇತಾಜಿ ಸುಭಾಷ್ ಚಂದ್ರ ಬೋಸ್, ನ್ಯಾಯಮೂರ್ತಿ ರಾಧಬಿನೋದ್ ಪಾಲ್ ಸೇರಿದಂತೆ ಹಲವು ಭಾರತೀಯರು ಜಪಾನ್ ಜತೆಗಿನ ಸಂಬಂಧ ಬಲಪಡಿಸಿದ್ದರು. ಎರಡನೇ ಮಹಾಯುದ್ಧದ ಬಳಿಕ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ ಹೊಸ ಎತ್ತರಕ್ಕೆ ಬೆಳೆಯಿತು ಎಂದು ಹೇಳಿದರು.
ಫಣಿ ಚಂಡಮಾರುತ ಸಂಬಂಧ ಭಾರತ ಕೈಗೊಂಡ ಸೂಕ್ತ ಮುಂಜಾಗ್ರತಾ ಕ್ರಮಗಳು ವಿಶ್ವಸಂಸ್ಥೆಯ ಗಮನ ಸೆಳೆದಿದ್ದು, ಭಾರತ ಕಾರ್ಯಕ್ಕೆ ವಿಶ್ವಸಂಸ್ಥೆ ಪ್ರಶಂಸೆ ವ್ಯಕ್ತಪಡಿಸಿತ್ತು ಎಂದರು.