ನವದೆಹಲಿ:ಜಿಎಸ್‌ಟಿ ಪರಿಹಾರ ಸಂಬಂಧ ಕೇಂದ್ರ ಇರಿಸಿರುವ ಎರಡು ಆಯ್ಕೆಗಳ ಬಗ್ಗೆ ಬಿಜೆಪಿಯೇತರ ರಾಜ್ಯ ಸರ್ಕಾರಗಳ ವಿರೋಧದ ನಡುವೆಯೂ 42ನೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಸಭೆಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ 42ನೇ ಸಭೆಯಲ್ಲಿ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಮತ್ತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು ಭಾಗವಹಿಸಿದ್ದರು.
ಸಭೆಯ ಬಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸೀತಾರಾಮನ್, ಇಂದು ನಡೆದ 42ನೇ ಜಿಎಸ್‌ಟಿ ಮಂಡಳಿಯಲ್ಲಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಈ ವರ್ಷ ಇಲ್ಲಿಯವರೆಗೆ ಸಂಗ್ರಹಿಸಲಾದ ಪರಿಹಾರ ಸೆಸ್ನ ಅಂದಾಜು ಮೊತ್ತ 20,000 ಕೋಟಿ ರೂ. ಇಂದು ರಾತ್ರಿ ಎಲ್ಲಾ ರಾಜ್ಯಗಳಿಗೆ ವಿತರಿಸಲಾಗುವುದು ಎಂದು ಹೇಳಿದರು.
ಇಂಟಿಗ್ರೇಟೆಡ್ ಸರಕು ಮತ್ತು ಸೇವಾ ತೆರಿಗೆಯ ದೀರ್ಘಕಾಲದ ಬಾಕಿ ಇರುವ ಸಮಸ್ಯೆಯನ್ನು ಇಂದಿನ ಜಿಎಸ್‌ಟಿ ಕೌನ್ಸಿಲ್ ಕೈಗೆತ್ತಿಕೊಂಡಿದೆ. ಈ ಮೊದಲು ಐಜಿಎಸ್‌ಟಿ ಹಂಚಿಕೆಗೆ ಯಾವುದೇ ಸೂತ್ರವಿರಲಿಲ್ಲ. ವಿತರಣೆಯಲ್ಲಿ ಹಲವು ವೈಪರೀತ್ಯಗಳಿಗೆ ಕಾರಣವಾಗಿತ್ತು ಎಂದರು.
10 ರಾಜ್ಯಗಳು ಕಾನೂನಿನ ಷರತ್ತುಗಳ ಅನ್ವಯ, ಪ್ರಸಕ್ತ ವರ್ಷದಲ್ಲಿ ರಾಜ್ಯಗಳಿಗೆ ಸಂಪೂರ್ಣ ಪರಿಹಾರ ನೀಡಬೇಕು ಮತ್ತು ಕೇಂದ್ರವೇ ಸಾಲ ಪಡೆಯಬೇಕು ಎಂದು ಒತ್ತಾಯಿಸುತ್ತಿವೆ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಅಕ್ಟೋಬರ್ 12ರಂದು ನಡೆಯಲಿರುವ ಮುಂದಿನ ಸಭೆಗೆ ಬಿಡಲಾಯಿತು ಎಂದು ಕೇರಳ ಸರ್ಕಾರದ ಹಣಕಾಸು ಸಚಿವ ಥಾಮಸ್ ಐಸಾಕ್ ಹೇಳಿದರು.