ನವದೆಹಲಿ: ಹಣಕಾಸು ಸಚಿವಾಲಯವು ಅಕ್ಟೋಬರ್ 14ರಿಂದ ನವೆಂಬರ್ ಮೊದಲ ವಾರದವರೆಗೆ ಬಜೆಟ್ ಪೂರ್ವ ಮತ್ತು ಪರಿಷ್ಕೃತ ಅಂದಾಜು ಕುರಿತು ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಬಜೆಟ್ ಪೂರ್ವ/ ಪರಿಷ್ಕೃತ ಅಂದಾಜು ಕುರಿತ ಸಭೆಗಳು ಅಕ್ಟೋಬರ್ 14ರಿಂದ ಆರಂಭವಾಗಲಿವೆ. ಎಲ್ಲ ಹಣಕಾಸು ಸಲಹೆಗಾರರು ಈ ಸಭೆಗಳಿಗೆ ಸಂಬಂಧಿಸಿದ ಅಗತ್ಯ ವಿವರಗಳನ್ನು ಪರಿಷ್ಕೃತ ಮಾದರಿಯಲ್ಲಿ ನಮೂದಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ದತ್ತಾಂಶಗಳು ಬಜೆಟ್ ಪೂರ್ವ ಚರ್ಚೆಗಳಿಗೆ ಆಧಾರವಾಗಿರುತ್ತವೆ ಎಂದು ಆರ್ಥಿಕ ಇಲಾಖೆಯ ಆಯವ್ಯಯ ವಿಭಾಗ ಬಜೆಟ್ ಸುತ್ತೋಲೆ (2020-21) ಹೊರಡಿಸಿ ಸೂಚಿಸಿದೆ.
ಕಾರ್ಯದರ್ಶಿ, ಖರ್ಚು ವಿಭಾಗ ಮತ್ತು ಹಣಕಾಸು ಸಲಹೆಗಾರರೊಂದಿಗೆ ಚರ್ಚೆ ನಡೆಸಿದ ಬಳಿಕ 2020-21ರ ಬಜೆಟ್ ಅಂದಾಜುಗಳನ್ನು ತಾತ್ಕಾಲಿಕವಾಗಿ ಅಂತಿಮಗೊಳಿಸಲಾಗುತ್ತದೆ. ಬಜೆಟ್ ಪೂರ್ವ ಸಭೆಗಳು ಅಕ್ಟೋಬರ್ 14 ರಿಂದ ಆರಂಭವಾಗಿ ನವೆಂಬರ್ ಮೊದಲ ವಾರದವರೆಗೂ ನಡೆಯಲಿವೆ. ಮುಂಬರುವ ಬಜೆಟ್ನಲ್ಲಿ ಲಿಂಗಾನುಪಾತ ಮತ್ತು ಮಕ್ಕಳಿಗೆ ಸಂಬಂಧಿಸಿದಂತೆ ಆದ್ಯತೆ ಸಿಗಲಿದೆ ಎಂಬ ಸುಳಿವನ್ನು ಅಧಿಕಾರಿಗಳು ನೀಡಿದ್ದಾರೆ.
ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್‌ಪಿ), ಲಿಂಗಾನುಪಾತ, ಮಕ್ಕಳು ಸೇರಿದಂತೆ ಬಜೆಟ್ಗೆ ಸಂಬಂಧಿಸಿದ ಇತರ ಹೊಸ ವಿಷಯಗಳನ್ನು ಸುತ್ತೋಲೆಯಲ್ಲಿ ಸೇರ್ಪಡೆ ಮಾಡಲಾಗಿದೆ. 2020-21ರ ಬಜೆಟ್ನಲ್ಲಿ ಇವುಗಳಿಗೆ ಹೆಚ್ಚಿನ ಅನುದಾನ ಸಿಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ.