ನವದೆಹಲಿ: ತೆರಿಗೆ ಸಂಪನ್ಮೂಲ ಅಂದಾಜಿಸಿ ಕೇಂದ್ರ ಮತ್ತು ರಾಜ್ಯಗಳ ನಡುವೆ ವರಮಾನ ಹಂಚಿಕೆಯ 2020-2021ರ 15ನೇ ಹಣಕಾಸು ಆಯೋಗದ ವರದಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೈ ಸೇರಿದೆ.
ಮಾಜಿ ರಾಜ್ಯಸಭಾ ಸದಸ್ಯ ಎನ್.ಕೆ. ಸಿಂಗ್ ನೇತೃತ್ವದಲ್ಲಿ 15ನೇ ಹಣಕಾಸು ಆಯೋಗ ರಚಿಸಲಾಗಿತ್ತು. ಸಿಂಗ್ ನೇತೃತ್ವದ ಸಮಿತಿಯು ದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಮಾಡಿ, ತಮ್ಮ ಅಧ್ಯಯನ ವರದಿಯನ್ನು ಸಲ್ಲಿಸಿದೆ.
ಈ ಬಗ್ಗೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದು, ಭಾರತದ 15ನೇ ವಿತ್ತೀಯ ಆಯೋಗದ ಮುಖ್ಯಸ್ಥ ಎನ್.ಕೆ. ಸಿಂಗ್ ಮುಂದಾಳತ್ವದ ಸದಸ್ಯರು ಹಾಗೂ ಆಯೋಗದ ಹಿರಿಯ ಅಧಿಕಾರಿಗಳು 2020-21ನೇ ಹಣಕಾಸು ವರ್ಷದ ವರದಿಯನ್ನು ಸಲ್ಲಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಸಂವಿಧಾನದ ಕಲಂ 280ರ ಅನ್ವಯ, ಪ್ರತಿ ಐದು ವರ್ಷಕ್ಕೊಮ್ಮೆ ಹಣಕಾಸು ಆಯೋಗ ರಚಿಸಲಾಗುತ್ತದೆ. ಈ ಆಯೋಗವು ತೆರಿಗೆ ವರಮಾನವನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆ ಮಾಡುವ ಸೂತ್ರ ಸೇರಿದಂತೆ ಕೇಂದ್ರದ ಯೋಜನೆಗಳ ಸಾಧಕ-ಬಾಧಕಗಳನ್ನು ಪರಾಮರ್ಶೆ ಮಾಡುತ್ತದೆ.