ನವದೆಹಲಿ: ಹೊಸ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆ ಮುಂದುವರೆದಿರುವುದು ಕೇಂದ್ರ ಸರ್ಕಾರಕ್ಕೆ ಇರುಸುಮುರಿಸು ಉಂಟು ಮಾಡುತ್ತಿದೆ. ಪೋರ್ಟಲ್‌ನಲ್ಲಿ ಕಂಡುಬರುವ ದೋಷಗಳನ್ನು ಇನ್ನೂ ಏಕೆ ಸರಿಪಡಿಸಿಲ್ಲ? ಈ ಬಗ್ಗೆ ಇಂದು ವಿವರಣೆ ನೀಡುವಂತೆ ಇನ್ಫೋಸಿಸ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಲೀಲ್ ಪರೇಖ್‌ಗೆ ಕೇಂದ್ರ ಹಣಕಾಸು ಸಚಿವಾಲಯ ಸಮನ್ಸ್ ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಹಣಕಾಸು ಸಚಿವಾಲಯ, ಆಗಸ್ಟ್ 21 ರಂದು ವೆಬ್‌ಸೈಟ್ ಕಾರ್ಯನಿರ್ವಹಣೆ ಸ್ಥಗಿತದ ನಂತರ ಪರೇಖ್ ಅವರಿಗೆ ಸಮನ್ಸ್ ನೀಡಲು ನಿರ್ಧರಿಸಲಾಗಿದೆ. 2020ರ ಜೂನ್ 7 ರಂದು ಹಳೆಯ ವೆಬ್‌ಸೈಟ್ ಸ್ಥಗಿತಗೊಂಡ ನಂತರ ಇ-ಫೈಲಿಂಗ್ ವೆಬ್‌ಸೈಟ್‌ಗೆ ಔಪಚಾರಿಕವಾಗಿ ಚಾಲನೆ ನೀಡಲಾಗಿತ್ತು. ಆಧುನಿಕ ತಂತ್ರಜ್ಞಾನದ ಮೂಲಕ ತೆರಿಗೆದಾರರಿಗೆ ಅನುಕೂಲ ಮಾಡಿಕೊಡಲು ಹಾಗೂ ತಡೆರಹಿತ ಸೇವೆಯಂತಹ ಅನುಭವಕ್ಕೆ ಹೊಸ ಇ-ಫೈಲಿಂಗ್ ಪೋರ್ಟಲ್ ನೀಡಬೇಕಿತ್ತು. ಆದರೆ, ಚಾಲನೆಗೊಂಡಾಗಿನಿಂದಲೂ ಪೋರ್ಟಲ್‌ನಲ್ಲಿ ಸರಿಯಾಗಿ ತೆರಿಗೆ ಪಾವತಿ ಮಾಡಲಾಗದೆ ತೆರಿಗೆದಾರರು ಸಮಸ್ಯೆ ಎದುರಿಸುತ್ತಿದ್ದಾರೆ.