ನವದೆಹಲಿ/ಬರ್ನ್: ಕಪ್ಪು ಹಣ ಸಂಗ್ರಹಿಸಿಡಲು ಅತ್ಯಂತ ಸುರಕ್ಷಿತ ತಾಣ ಎನಿಸಿಕೊಂಡಿರುವ ಸ್ವಿಸ್ ಬ್ಯಾಂಕ್ಗಳಲ್ಲಿ ಭಾರತೀಯರು ಬಚ್ಚಿಡುತ್ತಿದ್ದ ಕಾಳಧನದ ಕುರಿತು ಮಾಹಿತಿ ಪಡೆಯಲು ಶತಪ್ರಯತ್ನ ನಡೆಸುತ್ತಿದ್ದ ಭಾರತಕ್ಕೆ ಮತ್ತೊಂದು ಯಶಸ್ಸು ಲಭಿಸಿದೆ.
ಸ್ವಿಟ್ಜರ್ಲೆಂಡ್‌ನ ಸ್ವಿಸ್ ಬ್ಯಾಂಕ್ ತನ್ನಲ್ಲಿರುವ ಖಾತೆಗಳ ಬಗೆಗಿನ ಎರಡನೇ ಹಂತದ ವಿವರಗಳನ್ನು ಸ್ವಯಂಚಾಲಿತವಾಗಿ ವಿನಿಮಯ ಮಾಡಿಕೊಂಡಿದೆ. ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ (ಎಫ್‌ಟಿಎ), ಈ ವರ್ಷ ಸ್ವಯಂಚಾಲಿತ ಮಾಹಿತಿ ವಿನಿಮಯದಡಿ (ಎಇಒಐ) ಜಾಗತಿಕ ಮಾನದಂಡಗಳ ಚೌಕಟ್ಟಿನ ಒಳಗೆ ಹಣಕಾಸು ಖಾತೆಗಳ ಮಾಹಿತಿ ವಿನಿಮಯ ಮಾಡಿಕೊಂಡ 86 ದೇಶಗಳಲ್ಲಿ ಭಾರತವೂ ಸೇರಿದೆ.
ಭಾರತವು 2019ರ ಸೆಪ್ಟೆಂಬರ್‌ನಲ್ಲಿ ಎಇಒಐ ಅಡಿ ಸ್ವಿಟ್ಜರ್ಲೆಂಡ್‌ನಿಂದ ಮೊದಲ ಬಾರಿಗೆ ಖಾತೆಯ ವಿವರಗಳನ್ನು ಪಡೆದುಕೊಂಡಿತ್ತು. ಸ್ವಿಸ್ ಬ್ಯಾಂಕ್‌ಗಳಲ್ಲಿರುವ ಭಾರತೀಯರ ಕಪ್ಪು ಹಣ ವಾಪಸ್ ತರುವ ನರೇಂದ್ರ ಮೋದಿ ಸರ್ಕಾರ 2018ರಲ್ಲಿ ಭಾರತ - ಸ್ವಿಟ್ಜರ್‌ಲೆಂಡ್ ನಡುವೆ ಮಾಹಿತಿ ವಿನಿಮಯದ ಒಪ್ಪಂದ ಮಾಡಿಕೊಂಡಿತ್ತು. ಅದರ ಫಲಪ್ರದವಾಗಿ ಎರಡನೇ ಬಾರಿ ಕಾಳಧನಿಕರ ಮಾಹಿತಿ ಸ್ವೀಕರಿಸಿದೆ.
ಈ ವರ್ಷ ಮಾಹಿತಿ ವಿನಿಮಯವು ಸುಮಾರು 3.1 ಮಿಲಿಯನ್ (31 ಲಕ್ಷ) ಹಣಕಾಸು ಖಾತೆಗಳನ್ನು ಒಳಗೊಂಡಿದೆ ಎಂದು ಎಫ್‌ಟಿಎ ಪ್ರಕಟಣೆಯಲ್ಲಿ ತಿಳಿಸಿದೆ. ಮಾಹಿತಿ ಹಂಚಿಕೊಂಡ 86 ದೇಶಗಳಲ್ಲಿ ಭಾರತವನ್ನು ಸ್ಪಷ್ಟವಾಗಿ ಹೆಸರಿಸಿಲ್ಲ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. ಸ್ವಿಸ್ ಬ್ಯಾಂಕ್ಗಳು ಮತ್ತು ಇತರ ಹಣಕಾಸು ಸಂಸ್ಥೆಗಳ ಗ್ರಾಹಕರ ಖಾತೆಗಳ ಬಗ್ಗೆ ಸ್ವಿಟ್ಜರ್ಲೆಂಡ್ ಹಂಚಿಕೊಂಡಿರುವ ಪ್ರಮುಖ ದೇಶಗಳಲ್ಲಿ ಭಾರತವೂ ಸೇರಿದೆ ಎಂಬುದು ಗಮನಾರ್ಹ ಅಂಶ.
ಈ ವರ್ಷದ 86 ದೇಶಗಳಿಗೆ ಸಂಬಂಧಿಸಿದ ಸ್ವಿಟ್ಜರ್ಲೆಂಡ್‌ನ ಮೂರು ದಶಲಕ್ಷಕ್ಕೂ ಅಧಿಕ ಖಾತೆಗಳ ಮಾಹಿತಿ ವಿನಿಮಯದಲ್ಲಿ ಭಾರತೀಯ ನಾಗರಿಕರ ಮತ್ತು ಸಂಸ್ಥೆಗಳು ಗಣನೀಯ ಪ್ರಮಾಣದಲ್ಲಿ ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆರಿಗೆ ವಂಚನೆ ಸೇರಿದಂತೆ ಅಕ್ರಮ ಹಣಕಾಸಿನ ಬಗ್ಗೆ ಮಾಹಿತಿ ನೀಡುವಂತೆ ಆಡಳಿತಾತ್ಮಕ ನೆರವಿನಡಿ ಬಂದ ಮನವಿಗಳನ್ನು ಸ್ವೀಕರಿಸಿದ ಸ್ವಿಸ್ ಅಧಿಕಾರಿಗಳು, ಕಳೆದ ಒಂದು ವರ್ಷದಲ್ಲಿ 100ಕ್ಕೂ ಅಧಿಕ ಭಾರತೀಯ ನಾಗರಿಕರ ಮತ್ತು ಸಂಸ್ಥೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.