ನವದೆಹಲಿ: ಕೋವಿಡ್ -19 ಸೋಂಕು ಹರಡುವುದನ್ನು ತಡೆಯಲು ಈಗಿರುವ ಲಾಕ್‌ಡೌನ್ ಅವಧಿ ವಿಸ್ತರಿಸುವಂತೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಎಲ್ಲಾ ರಾಜ್ಯಗಳ ಹಿರಿಯ ವ್ಯಾಪಾರ ಮುಖಂಡರೊಂದಿಗೆ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಈ ಶಿಫಾರಸು ಮಾಡುತ್ತಿದ್ದೇವೆ ಎಂದು ಸಿಎಐಟಿ ಹೇಳಿದೆ.
ಪ್ರಸ್ತುತ ವರ್ತಕರು ಹಲವು ವ್ಯಾಪಾರ, ಆರ್ಥಿಕ ಮತ್ತು ವಿತ್ತೀಯ ಸವಾಲುಗಳನ್ನು ಎದುರಿಸಬೇಕಾಗಿದ್ದರೂ ದೇಶದ ಹಿತದೃಷ್ಟಿಯಿಂದ ಲಾಕ್ಡಾನ್ ಮುಂದುವರಿಸಬೇಕು. ವ್ಯಾಪಾರಿಗಳು ರಾಷ್ಟ್ರಕ್ಕೆ ಉತ್ತಮ ಸೇವೆಗಳನ್ನು ನೀಡಲು ಸದಾ ಸಿದ್ಧರಾಗಿದ್ದಾರೆ ಎಂದು ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.
ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರು ದೇಶಾದ್ಯಂತ ಇರುವ ವರ್ತಕರ ಸಮುದಾಯವು ಅಕ್ಷರಶ: ಮತ್ತು ಅತ್ಯುತ್ಸಾಹದಿಂದ ಪಾಲಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ.
ಒಕ್ಕೂಟವು ದೇಶದ ಎಲ್ಲಾ ರಾಜ್ಯಗಳ ಪ್ರಮುಖ ವ್ಯಾಪಾರ ಮುಖಂಡರೊಂದಿಗೆ ಮಾತುಕತೆ ನಡೆಸಿತ್ತು. ತೊಂದರೆಗೀಡಾದ ಸಮಯದಲ್ಲಿ, ಪ್ರಸ್ತುತ ಲಾಕ್‌ಡೌನ್ ಅವಧಿಯನ್ನು 2020ರ ಏಪ್ರಿಲ್ 30ರವರೆಗೆ ವಿಸ್ತರಿಸಿದರೆ ಕೋವಿಡ್-19 ಸೋಂಕು ಹರಡುವುದನ್ನು ನಿಯಂತ್ರಣದಲ್ಲಿ ಇಡಬಹುದು ಎಂದು ಸಿಎಐಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ.
ಸುಮಾರು 7 ಕೋಟಿ ಸಣ್ಣ ಉದ್ಯಮಗಳು ಮತ್ತೊಂದು ನಲವತ್ತು ಕೋಟಿ ಜನರನ್ನು ನೇಮಿಸಿಕೊಳ್ಳುತ್ತವೆ. ಆದ್ದರಿಂದ ಯಾವುದೇ ರೋಗವು ದೇಶದಲ್ಲಿ ಹರಡಲು ಆರಂಭಿಸಿದರೆ ಅದು ಇಡೀ ರಾಷ್ಟ್ರದ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತದೆ ಎಂದು ಕಳಕಳಿ ವ್ಯಕ್ತಪಡಿಸಿದೆ.