ಸಿಯಾಟಲ್ / ವಾಷಿಂಗ್ಟನ್: ಹೈಪರ್ ಲೂಪ್ ತಂತ್ರಜ್ಞಾನದ ವರ್ಗದಲ್ಲಿ ಮುಂಚೂಣಿಯಲ್ಲಿರುವ ಶತಕೋಟ್ಯಧಿಪತಿ ರಿಚರ್ಡ್ ಬ್ರಾನ್ಸನ್ ಒಡೆತನದ ಸಂಸ್ಥೆ ವರ್ಜಿನ್ ಹೈಪರ್ ಲೂಪ್, ಸೂಪರ್ ಹೈಸ್ಪೀಡ್ ಟ್ರಾವೆಲ್ ಸಿಸ್ಟಮ್‌ಗಾಗಿ 500 ಮಿಲಿಯನ್ ಡಾಲರ್ ವೆಚ್ಚದಲ್ಲಿ ಪ್ರಮಾಣೀಕರಣ ಕೇಂದ್ರ ಮತ್ತು ಟೆಸ್ಟ್ ಟ್ರ್ಯಾಕ್ ಪ್ರಯೋಗಕ್ಕೆ ಅಮೆರಿಕದ ವೆಸ್ಟ್ ವರ್ಜೀನಿಯಾ ಆಯ್ಕೆ ಮಾಡಿದೆ ಎಂದು ಕಂಪನಿ ತಿಳಿಸಿದೆ.
ಸೂಪರ್ ಸಾನಿಕ್ ರೈಲು ಒಂದು ಗಂಟೆ 600 ಮೈಲಿ (966 ಕಿ.ಮೀ.) ವೇಗದಲ್ಲಿ ಅರೆನಿರ್ವಾತ ಕೊಳವೆಗಳ ಮೂಲಕ ಪ್ರಯಾಣಿಕರು ಮತ್ತು ಸರಕುಗಳನ್ನು ಸಾಗಿಸುತ್ತದೆ. ಕೊಳವೆ ಮಾದರಿಯಲ್ಲಿ ವಿನ್ಯಾಸಗೊಳಿಸಲಾದ ಹೈಪರ್‌ಲೂಪ್ ವ್ಯವಸ್ಥೆಗೆ ಇದೇ ಮೊದಲ ಬಾರಿಗೆ ಯುಎಸ್ ಸಿದ್ಧವಾಗಿದೆ.
ಹೈಪರ್ ಲೂಪ್ ರೈಲು ಹಳಿಗಳ ಮೇಲೆ ಚಲಿಸುವುದಿಲ್ಲ. ಬದಲಿಗೆ ಕಾಂಕ್ರಿಟ್ ಪಿಲ್ಲರ್ನಿಂದ ಕೊಳವೆ ಮಾದರಿಯಲ್ಲಿ ಮಾರ್ಗ ನಿರ್ವಿುಸಲಾಗುತ್ತದೆ. ಇದೊಂದು ಅರೆನಿರ್ವಾತ ಪ್ರದೇಶವಾಗಿರುತ್ತದೆ. ಒತ್ತಡದ ಬಲದಿಂದ ರೈಲು ಸೂಪರ್ ಸಾನಿಕ್ ವೇಗದಲ್ಲಿ ಚಲಿಸುತ್ತದೆ. ಕೊಳವೆ ರೀತಿಯ ಮಾರ್ಗಗಳ ಮೇಲೆ ಸೋಲಾರ್ ಪ್ಯಾನಲ್ ಅಳವಡಿಸಿ ಇದರಿಂದ ಉತ್ಪಾದಿಸಲಾದ ವಿದ್ಯುತ್ನಿಂದ ರೈಲು ಓಡುತ್ತದೆ. ರೈಲಿನ ತುದಿಯಲ್ಲಿ ಲೈನರ್ ಮೋಟಾರ್ ಅಳವಡಿಸಲಾಗುತ್ತಿದ್ದು, ಇದು ಇಂಜಿನ್ ರೀತಿಯಲ್ಲಿ ಕೆಲಸ ಮಾಡಲಿದೆ.
ಬ್ರಾನ್ಸನ್ ಅವರು ಗುರುವಾರದ ಪತ್ರಿಕಾಗೋಷ್ಠಿಯಲ್ಲಿ ಈ ನಿರ್ಧಾರ ಘೋಷಿಸಿದ್ದಾರೆ. ಅಮೆರಿಕ ಸಾರಿಗೆ ಇಲಾಖೆಯ ಕಾರ್ಯದರ್ಶಿ ಎಲೈನ್ ಚಾವೊ, ರಾಜ್ಯದ ರಿಪಬ್ಲಿಕನ್ ಗವರ್ನರ್ ಜಿಮ್ ಜಸ್ಟೀಸ್ ಮತ್ತು ಪಶ್ಚಿಮ ವರ್ಜೀನಿಯಾದ ಅಮೆರಿಕನ್ ಸೆನೆಟರ್ಗಳು, ರಿಪಬ್ಲಿಕನ್ ಪಕ್ಷದ ಶೆಲ್ಲಿ ಮೂರ್ ಕ್ಯಾಪಿಟೊ ಮತ್ತು ಡೆಮಾಕ್ರಟಿಕ್ನ ಜೋ ಮಂಚಿನ್ ಈ ವೇಳೆ ಹಾಜರಿದ್ದರು.
ಇಂದು ನಾವು ಯುನೈಟೆಡ್ ಸ್ಟೇಟ್ಸ್ ಮತ್ತು ಅದರಾಚೆಯ ವಾಣಿಜ್ಯ ನಿಯೋಜನೆ ಮತ್ತು ಕಾರ್ಯಾಚರಣೆಗಳಿಗೆ ಅಡಿಪಾಯ ಹಾಕಿದ್ದೇವೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಜೇ ವಾಲ್ಡರ್ ಸುದ್ದಿಗಾರರಿಗೆ ತಿಳಿಸಿದರು.
ಹೈಪರ್ ಲೂಪ್ ವ್ಯವಸ್ಥೆಯಲ್ಲಿ ಮೌನ ಪ್ರಯಾಣ ಆನಂದಿಸಲು ಮ್ಯಾಗ್ನೆಟಿಕ್ ಲೆವಿಟೇಷನ್ ತಂತ್ರಜ್ಞಾನ ಬಳಸುತ್ತಿದ್ದೇವೆ. ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ನಡುವಿನ ಪ್ರಯಾಣವು ಕೇವಲ 30 ನಿಮಿಷಗಳಷ್ಟು ಆಗಲಿದೆ. ಅದು ವಾಣಿಜ್ಯ ಜೆಟ್ ಹಾರಾಟಕ್ಕಿಂತ ಎರಡು ಪಟ್ಟು ವೇಗವಾಗಿರುತ್ತದೆ. ಅತಿ ವೇಗದ ರೈಲು ಪ್ರಯಾಣಕ್ಕಿಂತ ನಾಲ್ಕು ಪಟ್ಟು ವೇಗವಾಗಿರುತ್ತದೆ ಎಂದು ಹೇಳಿದರು.
ಪಶ್ಚಿಮ ವರ್ಜೀನಿಯಾದ ಟಕರ್ ಮತ್ತು ಗ್ರಾಂಟ್ ಕೌಂಟಿಗಳ ಕಲ್ಲಿದ್ದಲು ಗಣಿ ಪ್ರದೇಶದಲ್ಲಿ 2022ರಲ್ಲಿ ನಿರ್ಮಾಣ ಕಾರ್ಯಪೂರ್ಣಗೊಳ್ಳಲಿದೆ. 2025ರ ವೇಳೆಗೆ ಸುರಕ್ಷತಾ ಪ್ರಮಾಣೀಕರಣ ಮುಗಿದು 2030ರ ವೇಳೆಗೆ ವಾಣಿಜ್ಯ ಕಾರ್ಯಾಚರಣೆ ಪ್ರಾರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.