ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭವಿಷ್ಯ ನಿಧಿ ಠೇವಣಿಗಳ ಮೇಲೆ ಶೇ 8.5ರಷ್ಟು ಬಡ್ಡಿದರ ಉಳಿಸಿಕೊಳ್ಳಲು ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ ನಿರ್ಧರಿಸಿದೆ.
2020-21ರ ಆರ್ಥಿಕ ವರ್ಷಕ್ಕೆ ಸದಸ್ಯರ ಖಾತೆಗಳಲ್ಲಿ ಇಪಿಎಫ್ ಕ್ರೋಢೀಕರಣದ ಮೇಲೆ ಜಮಾ ಮಾಡಲು ಶೇ 8.50ರಷ್ಟು ವಾರ್ಷಿಕ ಬಡ್ಡಿದರವನ್ನು ಕೇಂದ್ರ ಮಂಡಳಿ ಶಿಫಾರಸು ಮಾಡಿದೆ ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀನಗರದಲ್ಲಿ ಗುರುವಾರ ನಡೆದ ಇಪಿಎಫ್‌ಒನ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ವಹಿಸಿದ್ದರು. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2020-21ರ ಅವಧಿಯಲ್ಲಿ ಭವಿಷ್ಯ ನಿಧಿ ಠೇವಣಿಗಳ ಬಡ್ಡಿ ದರಗಳನ್ನು ಶೇ 8.5ರಷ್ಟನ್ನು ಕಾಯ್ದುಕೊಂಡಿದೆ. ಇದು ಕಳೆದ 2019-20ರ ಹಣಕಾಸು ವರ್ಷದಂತೆಯೇ ಇದೆ ಎಂದು ಕಾರ್ಮಿಕ ಸಚಿವ ತಿಳಿಸಿದ್ದಾರೆ.