ನವದೆಹಲಿ:ಇಂದಿನಿಂದ ಕೇಂದ್ರದ ವಾರ್ಷಿಕ ಬಜೆಟ್ ಅಧಿವೇಶನ ಆರಂಭವಾಗಿದೆ. ಉದ್ಯೋಗ ಸೃಷ್ಟಿ, ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳು ಹಾಗೂ ಹಣದುಬ್ಬರ ತಗ್ಗಿಸುವುದು ನಾಳೆ ಮಂಡನೆಯಾಗಲಿರುವ ಬಜೆಟ್‌ನಲ್ಲಿ ಜನರ ನಿರೀಕ್ಷೆಗಳಲ್ಲಿ ಪ್ರಮುಖವಾಗಿವೆ ಎಂದು ಖ್ಯಾತ ಆರ್ಥಿಕ ತಜ್ಞ ಆಕಾಶ್ ಜಿಂದಾಲ್ ಹೇಳಿದ್ದಾರೆ.
'ಈಟಿವಿ ಭಾರತ'ಕ್ಕೆ ವಿಶೇಷ ಸಂದರ್ಶನ ನೀಡಿರುವ ಜಿಂದಾಲ್ ಅವರು, ಕೋವಿಡ್‌ನಿಂದ ದೇಶದಲ್ಲಿ ಉಂಟಾದ ಆರ್ಥಿಕ ನಷ್ಟದಿಂದಾಗಿ ಆರ್ಥಿಕ ಬೆಳವಣಿಗೆಯ ವೇಗವು ಗಣನೀಯವಾಗಿ ಕುಸಿದಿದೆ. ಇದರ ಪರಿಣಾಮವಾಗಿ ಉತ್ಪಾದನೆಯು ತಗ್ಗಿದೆ. ಮಧ್ಯಮ ವರ್ಗ, ಬಡ ವರ್ಗಗಳು, ಸಣ್ಣ ವ್ಯಾಪಾರಿಗಳು ಹಾಗೂ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವ ಜನಸಂಖ್ಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಜನಸಾಮಾನ್ಯರು ಬೆಲೆ ಏರಿಕೆಯ ಬಿಸಿ ಇಲ್ಲದ ಹಾಗೂ ಜನಪ್ರಿಯ ಬಜೆಟ್ ಅನ್ನು ನಿರೀಕ್ಷಿಸಬಹುದು ಎಂದಿದ್ದಾರೆ.
ಸಮಾಜದಲ್ಲಿ ಅಸಮತೋಲನ ಸೃಷ್ಟಿಸುವುದನ್ನು ತಪ್ಪಿಸಲು ಸರ್ಕಾರವು ಬಜೆಟ್‌ನಲ್ಲಿ ನಿರುದ್ಯೋಗ ಮತ್ತು ಹಣದುಬ್ಬರ ಎರಡಕ್ಕೂ ಆದ್ಯತೆ ನೀಡಬೇಕು. ಈ ಸಮಸ್ಯೆಗಳನ್ನು ನಿಯಂತ್ರಿಸದಿದ್ದರೆ ಸಾಕಷ್ಟು ಸಾಮಾಜಿಕ ಅಶಾಂತಿಯನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ಆಕಾಶ್ ಜಿಂದಾಲ್ ಅಭಿಪ್ರಾಯಪಟ್ಟಿದ್ದಾರೆ.
'ವಸತಿ ಸಮಸ್ಯೆ ನಿವಾರಣೆ ಸರ್ಕಾರಕ್ಕೆ ಮುಖ್ಯ ಆದ್ಯತೆ'..ವಸತಿ ಸಮಸ್ಯೆಗಳನ್ನು ನಿವಾರಿಸುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ನಾಳಿನ ಬಜೆಟ್‌ನಲ್ಲಿ ಗೃಹ ಸಾಲ ಕಡಿತದ ಮಿತಿಯ ಹೆಚ್ಚಳದ ಮೇಲೆ ಕೇಂದ್ರೀಕರಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಇನ್ನೊಂದು ಪ್ರಮುಖ ಆದ್ಯತೆಯನ್ನು ಕೃಷಿ ಕ್ಷೇತ್ರಕ್ಕೆ ನೀಡಬೇಕು. ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಸರ್ಕಾರ ರದ್ದುಗೊಳಿಸಿದ್ದರೂ ಕೃಷಿ ಕ್ಷೇತ್ರವು ಇನ್ನೂ ಕರಾಳ ದಿನಗಳನ್ನು ಎದುರಿಸುತ್ತಿದೆ. ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಶೇ.40ರಷ್ಟು ಹೆಚ್ಚಳವನ್ನು ನಿರೀಕ್ಷಿಸಬೇಕು. ಇದು ನಮ್ಮ ರೈತರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಜೊತೆಗೆ ಅಲ್ಪ ಮಟ್ಟಿಗೆ ಪರಿಹಾರವನ್ನೂ ನೀಡುತ್ತದೆ ಎಂದು ಜಿಂದಾಲ್ ವಿವರಿಸಿದ್ದಾರೆ.
ಮಹಾಮಾರಿ ಕೋವಿಡ್ ಕೇವಲ ಜನರ ಮೇಲೆ ಮಾತ್ರ ಪರಿಣಾಮ ಬೀರಿಲ್ಲ. ಸರ್ಕಾರಕ್ಕೂ ಹೊಡೆತ ನೀಡಿದೆ. ಸಮಾಜ ಕಲ್ಯಾಣ ಯೋಜನೆಗಳಾದ ಜನರಿಗೆ ಉಚಿತ ಆಹಾರ, ಉಚಿತ ಲಸಿಕೆ ಸೇರಿದಂತೆ ಹಲವು ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಿಕೆ ಹಿನ್ನೆಲೆಯಲ್ಲಿ ಸರ್ಕಾರ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಬಹುದಾದ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ. ಸಮಾಜದ ಎಲ್ಲಾ ವರ್ಗದ ಜನರು ಈ ಬಜೆಟ್‌ನಲ್ಲಿ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.