ನವದೆಹಲಿ:ಕೇಂದ್ರದಮಾಜಿ ಹಣಕಾಸು ಸಚಿವ, ಕಾಂಗ್ರೆಸಿನ ಹಿರಿಯ ಮುಖಂಡ ಪಿ.ಚಿದಂಬರಂ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. 'ಕಳೆದ ಆರು ತಿಂಗಳಿಂದ ಭಾರತದ ಆರ್ಥಿಕತೆಯ ಧ್ವಂಸವಾಗಿದೆ' ಎಂದು ಟೀಕಿಸಿದರು.
ಇಂದು ಭಾರತದ ಆರ್ಥಿಕತೆಯು ಸಂಪೂರ್ಣ ಮುಗ್ಗರಿಸಿದೆ. ಪ್ರಸ್ತುತ ನಿರುದ್ಯೋಗದ ಪ್ರಮಾಣವು ಇಪ್ಪತ್ತು ವರ್ಷಗಳಲ್ಲೇ ಅತ್ಯಧಿಕ ಪ್ರಮಾಣದಲ್ಲಿದೆ ಎಂದು 'ಭಾರತ್ ಬಚಾವೋ' ಪ್ರತಿಭಟನಾ ಸಮಾವೇಶದಲ್ಲಿ ಹೇಳಿದರು.
ಆರ್ಥಿಕತೆಯು ಪ್ರತಿದಿನ ಮುಳುಗುತ್ತಲೇ ಸಾಗುತ್ತಿದೆ. ಅದು ಒಂದೊಂದೇ ಹಂತದಿಂದ ಇಳಿಕೆಯಾಗುತ್ತಿದೆ. ಆಹಾರ ಹಣದುಬ್ಬರ ಶೇ.10ರಷ್ಟಾಗಿದೆ. ರಫ್ತು 4 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಪ್ರತಿದಿನ ನಿಮಗೆ ಕೆಟ್ಟ ಸುದ್ದಿ ಸಿಗುತ್ತಿದೆ. ನಾಳೆ ನಿಮಗೆ ಇನ್ನಷ್ಟು ಕೆಟ್ಟ ಸುದ್ದಿ ಸಿಗುತ್ತವೆ. ಆರು ತಿಂಗಳಲ್ಲಿ ನರೇಂದ್ರ ಮೋದಿ ಸರ್ಕಾರ ಭಾರತದ ಆರ್ಥಿಕತೆಯನ್ನು ಹಾಳು ಮಾಡಿದೆ ಎಂದು ಆರೋಪಿಸಿದರು.
ಭಾರತ್ ಬಚಾವೋ ಪ್ರತಿಭಟನಾ ಸಮಾವೇಶದಲ್ಲಿ ಪಿ ಚಿದಂಬರಂ.. ನಿನ್ನೆ (ಶುಕ್ರವಾರ) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಡೆಸಿದ ಸುದ್ದಿಗೋಷ್ಠಿ ಟೀಕಿಸಿದ ಚಿಂದಂಬರಂ, 'ನಿನ್ನೆ ಹಣಕಾಸು ಸಚಿವರು ಹೇಳಿದರು, ಎಲ್ಲವೂ ಸರಿಯಾಗಿದೆ ಎಂದು. ನಾವು ಪ್ರಪಂಚದಲ್ಲಿ ಅಗ್ರ ಸ್ಥಾನದಲ್ಲಿ ಇದ್ದೇವೆ ಎಂದು. ಅವರು ಹೇಳದ ಏಕೈಕ ವಿಷಯವೆಂದರೆ ಅಚ್ಛೆ ದಿನ್ ಆನೆ ವಾಲೆ ಹೈ (ಒಳ್ಳೆಯ ದಿನಗಳ ಬರಲಿವೆ). ಅವರ ಬಳಿ ಕೊಡಲು ಹಣ ಇಲ್ಲ ಎಂದು ವ್ಯಂಗ್ಯವಾಡಿದರು.