ನವದೆಹಲಿ:ಆರ್ಥಿಕತೆಯು ತೊಂದರೆಯಲ್ಲಿಲ್ಲ. ದೇಶವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಸಾಗುತ್ತಿರುವ ಹಸಿರಿನ ಚಿಗುರೆಲೆಯ ಸೂಚಕಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾಂಗ್ರೆಸ್ಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ನಿನ್ನೆ (ಸೋಮವಾರ) 'ದೇಶದ ಆರ್ಥಿಕತೆ ಸಂಕಷ್ಟದಲ್ಲಿದೆ. ಜನ ಭಯಭೀತರಾಗಿದ್ದಾರೆ. ಐಸಿಯುನಲ್ಲಿರುವ ರೋಗಿಯನ್ನು (ಆರ್ಥಿಕತೆ) ಹೊರಗಿಟ್ಟು, ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್ ಘೋಷಣೆ ಜಪಿಸುತ್ತಿದ್ದಾರೆ' ಎಂದು ಕೇಂದ್ರದ ಆರ್ಥಿಕ ನಿರ್ವಹಣೆಯನ್ನ ಟೀಕಿಸಿದ್ದರು.
ಲೋಕಸಭೆಯಲ್ಲಿ ಮಾತಾನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಅವರ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಸೀತಾರಾಮನ್, ಸರ್ಕಾರ ಕೈಗೊಂಡಿರುವ ಉಪಕ್ರಮಗಳಿಂದಾಗಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಹೆಚ್ಚಳವಾಗಿದೆ. ಕಾರ್ಖಾನೆಗಳ ಉತ್ಪಾದನೆ ಏರಿಕೆಯಾಗಿದೆ. ಕಳೆದ ಮೂರು ತಿಂಗಳಲ್ಲಿ ಸತತ 1 ಲಕ್ಷ ಕೋಟಿ ರೂ.ನಷ್ಟು ಜಿಎಸ್ಟಿ ಸಂಗ್ರಹವಾಗಿದೆ. ಇವುಗಳ ಪ್ರಗತಿ ಆರ್ಥಿಕತೆಯಲ್ಲಿ ಹಸಿರಿನ ಚಿಗುರುಗಳ ಸೂಚಕಗಳಾಗಿವೆ ಎಂದರು.
ಆರ್ಥಿಕತೆಯಲ್ಲಿ ಹಸಿರು ಚಿಗುರುಗಳಿವೆ ಎಂದು ತೋರಿಸುವ ಏಳು ಪ್ರಮುಖ ಸೂಚಕಗಳಿವೆ. ಆರ್ಥಿಕತೆ ಸಂಕಷ್ಟದಲ್ಲಿಲ್ಲ. ಫಾರೆಕ್ಸ್ ಮೀಸಲು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ ಹಾಗೂ ಸ್ಟಾಕ್ ಮಾರುಕಟ್ಟೆ ಸಹ ಮೇಲ್ಮುಖವಾಗಿ ಸಾಗುತ್ತಿದೆ ಎಂದು ಬಜೆಟ್ ಮೇಲಿನ ಚರ್ಚೆ ವೇಳೆ ಲೋಕಸಭೆಯಲ್ಲಿ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಆರ್ಥಿಕತೆಯ ನಾಲ್ಕು ಎಂಜಿನ್ಗಳಾದ ಖಾಸಗಿ ಹೂಡಿಕೆ, ರಫ್ತು, ಖಾಸಗಿ ಹಾಗೂ ಸಾರ್ವಜನಿಕ ಉಪಭೋಗದತ್ತ ಹೆಚ್ಚು ಕೇಂದ್ರಿಕರಿಸಿದೆ. ದೇಶಾದ್ಯಂತ ಅಭಿವೃದ್ಧಿ ಕಾರ್ಯಗಳಿಗೆ 2024-25ರ ವೇಳೆಗೆ 103 ಲಕ್ಷ ಕೋಟಿ ರೂ. ವೆಚ್ಚದ ರಾಷ್ಟ್ರೀಯ ಮೂಲಸೌಕರ್ಯ ಯೋಜನೆಯನ್ನು ಡಿಸೆಂಬರ್ ತಿಂಗಳಲ್ಲಿ ಘೋಷಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.