ನವದೆಹಲಿ:ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಮತ್ತು ಇತಿಹಾಸಕಾರ ರಾಮಚಂದ್ರ ಗುಹಾ ನಡುವೆ ಟ್ವಿಟ್ಟರ್ನಲ್ಲಿ ಜಟಾಪಟಿ ನಡೆದಿದ್ದು, 'ಆರ್ಥಿಕತೆಯು ಸುರಕ್ಷಿತರ ಕೈಯಲ್ಲಿ ಇರುವುದರಿಂದ ಇತಿಹಾಸಕಾರ ಚಿಂತಿಸಬಾರದು' ಎಂದು ಸಚಿವೆ ವ್ಯಂಗ್ಯವಾಡಿದ್ದಾರೆ.
ಗುಜರಾತ್ ಆರ್ಥಿಕವಾಗಿ ಪ್ರಬಲವಾಗಿದೆ. ಆದರೆ, "ಸಾಂಸ್ಕೃತಿಕವಾಗಿ ಹಿಂದುಳಿದಿದೆ" ಎಂದು 1939ರಲ್ಲಿ ಬ್ರಿಟಿಷ್ ಬರಹಗಾರ ಫಿಲಿಪ್ ಸ್ಪ್ರಾಟ್ ಅವರ ಅಭಿಪ್ರಾಯವನ್ನು ಉಲ್ಲೇಖಿಸಿ ಗುಹಾ ಅವರು ಟ್ವೀಟ್ ಮಾಡಿದ್ದರು.
ಎರಡನೇ ವಿಶ್ವಯುದ್ಧದ ಸಮಯದಲ್ಲಿ 1,000 ಪೋಲೆಂಡ್ ಮಕ್ಕಳಿಗೆ ಜಾಮ್ನಗರ ಮಹಾರಾಜ ಜಾಮ್ ಸಾಹೇಬ್ ಅವರು ಆಶ್ರಯ ನೀಡಿದ್ದರು. ಈ ಬಗ್ಗೆ ಗೌರವ ಸೂಚಿಸಲು ಪೋಲೆಂಡ್ ಸರ್ಕಾರ 2018ರ ಸೆಪ್ಟೆಂಬರ್ನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಅಂದು ಪ್ರಕಟವಾದ ಲೇಖನಕ್ಕೆ ಸೀತಾರಾಮನ್ ಅವರು ವೆಬ್‌ಲಿಂಕ್ ಪೋಸ್ಟ್ ಮಾಡಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಗುಹಾ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿ, ಭಾರತೀಯರು ಅವುಗಳನ್ನು ವಿಭಜಿಸುವ "ತಂತ್ರಗಳಿಗೆ" ಬರುವುದಿಲ್ಲ ಎಂದು ಬರೆದರು.
ಸ್ವಲ್ಪ ಸಮಯದ ನಂತರ ಗುಹಾ ಟ್ವೀಟ್ ಮಾಡಿದ್ದು, 'ಇದು ಗುಜರಾತ್ ಸಿಎಂ ಮಾತ್ರ ಎಂದು ನಾನು ಭಾವಿಸಿದ್ದೆ. ಆದರೆ, ಈಗ ಹಣಕಾಸು ಸಚಿವೆ ಕೂಡ ಇತಿಹಾಸಕಾರರ ಟ್ವೀಟ್‌ಗಳ ಬಗ್ಗೆ ಗಮನ ಕೊಡುವುದು ತೋರುತ್ತಿದೆ. ಆರ್ಥಿಕತೆಯು ಖಂಡಿತವಾಗಿಯೂ ಸುರಕ್ಷಿತರ ಕೈಯಲ್ಲಿದೆ' ಎಂದು ಕಮೆಂಟ್ ಬರೆದಿದ್ದರು.
ಗುಹಾ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಸೀತಾರಾಮನ್, ಆರ್ಥಿಕತೆಯು ಸುರಕ್ಷಿತರ ಕೈಯಲ್ಲಿದೆ. ಚಿಂತಿಸಬೇಡಿ, ಶ್ರೀ ಗುಹಾ. ಪ್ರಸ್ತುತ ರಾಷ್ಟ್ರೀಯ ಪ್ರವಚನದಲ್ಲಿ ಆಲೋಚನೆಗಳ ಅರಿವನ್ನು ತೆಗೆದುಕೊಳ್ಳುವುದು ಮತ್ತು ಜವಾಬ್ದಾರಿಯುತವಾಗಿ ನನ್ನ ಕೆಲಸ ಮಾಡುವುದು ಪರಸ್ಪರ ಪ್ರತ್ಯೇಕವಾಗಿಲ್ಲ. ಇತಿಹಾಸದಲ್ಲಿ ಆಸಕ್ತಿಯು ಒಂದು ಪ್ಲಸ್ ಪಾಯಿಂಟ್ ಆಗಿದೆ. ಖಂಡಿತವಾಗಿಯೂ ನಿಮ್ಮಂತಹ ಬುದ್ಧಿಜೀವಿ ಅದನ್ನು ತಿಳಿದಿರಬೇಕು ಎಂದು ಬರೆದುಕೊಂಡಿದ್ದಾರೆ.