ನವದೆಹಲಿ:ನಿಧಾನಗತಿ...ಆರ್ಥಿಕ ಹಿಂಜರಿತ...ವಾಣಿಜ್ಯ ಸಮರ...ಅಜಾಗತೀಕರಣ ಅಥವಾ ಡಿಗ್ಲೋಬಲೈಝೇಷನ್... ನಂತಹ ವಿಷಯಗಳ ಚರ್ಚೆಯು ಇತ್ತೀಚಿನ ದಿನಗಳಲ್ಲಿ ಸರ್ವವ್ಯಾಪಿಯಾಗಿದೆ. ಪ್ರಸ್ತುತ ಆರ್ಥಿಕ ಸನ್ನಿವೇಶಗಳ ಬಗ್ಗೆ ವಿಶ್ವಾದ್ಯಂತ ಆತಂಕವಿದ್ದು, ಭಾರತ ಸಹ ಇದರಿಂದ ಹೊರತಾಗಿಲ್ಲ.
ದೇಶದ ಅತಿದೊಡ್ಡ ವಲಯವಾದ ಆಟೊಮೊಬೈಲ್ ಮಾರಾಟ ಬೆಳವಣಿಗೆಯು ತೀವ್ರವಾಗಿ ಕುಸಿದಿದೆ. ರೈಲ್ವೆಯ ಸರಕು ಸಾಗಣೆ, ದೇಶೀಯ ವಿಮಾನಯಾನ, ಮೂಲ ಸೌಕರ್ಯಗಳು, ಆಮದು, ಕೈಗಾರಿಕಾ ಉತ್ಪಾದನೆ, ಸಾಲದ ಸುಲಭ ಲಭ್ಯತೆ, ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತಕ್ಕೆ ಹಿನ್ನಡೆ ಆಗುತ್ತಿದೆ.
ಭಯಾನಕವಾದ ವಾಣಿಜ್ಯ ಸಮರವು ತೈಲದ ದರವನ್ನು ಪಾತಾಳಕ್ಕೆ ತಳ್ಳಿದೆ. ಅಮೆರಿಕ ಅಧ್ಯಕ್ಷರು ಚೀನಾದ ಸರಕುಗಳ ಮೇಲೆ ಸುಂಕದ ದರ ಹೆಚ್ಚಿಸಿ ಟ್ರೇಡ್ ವಾರ್ಗೆ ಚಾಲನೆ ನೀಡಿದರು. ಪ್ರತಿಯಾಗಿ ಚೀನಾ ಕೂಡ ಅದೇ ಹಾದಿ ಹಿಡಿದು ಅಮೆರಿಕದ ಸರಕುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಿತು. ಯುರೋಪಿಯನ್ ರಾಷ್ಟ್ರಗಳಲ್ಲಿ ಕೂಡ ಪರಿಸ್ಥಿತಿ ಕಠೋರವಾಗಿದೆ.
ವಿಶ್ವ ಆರ್ಥಿಕತೆಯನ್ನು ಉನ್ನತಿಗೇರಿಸುವಲ್ಲಿ ಭಾರತ ಮತ್ತು ಚೀನಾದ ಪಾತ್ರದ ಬಗ್ಗೆ ಅರ್ಥಶಾಸ್ತ್ರಜ್ಞರು ಆಶಾವಾದ ಹೊಂದಿದ್ದಾರೆ. 17 ಮತ್ತು 18ನೇ ಶತಮಾನಗಳಲ್ಲಿ ಈ ಎರಡೂ ರಾಷ್ಟ್ರಗಳು ಜಾಗತಿಕ ಆರ್ಥಿಕತೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವು. 1600ರ ವೇಳೆಯಲ್ಲಿ ವಿಶ್ವದ ಒಟ್ಟು ಜಿಡಿಪಿ ಪಾಲಿನಲ್ಲಿ ಭಾರತ ಮತ್ತು ಚೀನಾದ ಪಾಲು ಶೇ 51.4ರಷ್ಟಿತ್ತು. 1750ರ ಹೊತ್ತಿಗೆ ಪರಿಸ್ಥಿತಿ ವ್ಯತಿರಿಕ್ತವಾಯಿತು. 1950ರ ದಶಕದಲ್ಲಿ ಜಪಾನ್, ಆಗ್ನೇಯ ಏಷ್ಯಾದ ರಾಷ್ಟ್ರಗಳ ಮತ್ತು ಭಾರತ-ಚೀನಾದ ಬೆಳವಣಿಗೆಯ ವೇಗವನ್ನು ಗಮನಿಸಿದ ಅಂದಿನ ಇತಿಹಾಸಕಾರರು, 'ಏಷ್ಯಾದ ರಾಷ್ಟ್ರಗಳು ವಿಶ್ವ ನಾಯಕರಾಗುತ್ತಾರೆ' ಎಂದು ಬಣ್ಣಿಸಿದ್ದರು.
ಆರ್ಥಿಕ ಹಿಂಜರಿತ ಎಂದರೇನು?
ಸಾಮಾನ್ಯವಾಗಿ ಹೇಳುವುದಾದರೆ, ಒಟ್ಟು ದೇಶೀಯ ಉತ್ಪನ್ನವು (ಜಿಡಿಪಿ) ದೇಶದಲ್ಲಿ ಉತ್ಪಾದಿಸುವ ಸರಕು ಮತ್ತು ಸೇವೆಗಳ ಮೌಲ್ಯಕ್ಕೆ ಸಮಾನವಾಗಿರುತ್ತದೆ. ಸತತ ಮೂರು ತ್ರೈಮಾಸಿಕಗಳಲ್ಲಿ ಜಿಡಿಪಿ ಬೆಳವಣಿಗೆಯ ದರಗಳಲ್ಲಿನ ಕಡಿತವಾದರೆ ಅದು ಆರ್ಥಿಕ ಹಿಂಜರಿತದ ಸಾಮಾನ್ಯ ವ್ಯಾಖ್ಯಾನವಾಗಿದೆ.
ಭಾರತದ ಜಿಡಿಪಿಯು 2019ರ ಮೊದಲ ತ್ರೈಮಾಸಿಕದಲ್ಲಿ ಶೇ 5.8ರಷ್ಟು ಆಗಿದ್ದು, ಮುಂದಿನ 2ನೇ ತ್ರೈಮಾಸಿಕದಲ್ಲಿ ಶೇ 5ಕ್ಕೆ ಇಳಿದರೆ, 3ನೇ ತ್ರೈಮಾಸಿಕವೂ ಕಡಿಮೆ ಬೆಳವಣಿಗೆ ದರ ದಾಖಲಿಸಿದರೆ ಆರ್ಥಿಕ ಹಿಂಜರಿತವು ಎಲ್ಲ ಕ್ಷೇತ್ರಗಳನ್ನು ಆವರಿಸಿದೆ ಎಂದು ತೀರ್ಮಾನಿಸಬಹುದು. ಅರ್ಥಶಾಸ್ತ್ರದ ಸಾಮಾನ್ಯ ವಾಖ್ಯದಲ್ಲಿ ಹೇಳುವುದಾರೇ: ಸತತ ಮೂರು ತ್ರೈಮಾಸಿಕಗಳಲ್ಲಿ ಜಿಡಿಪಿ ತಗ್ಗಿದ್ದರೇ ಆರ್ಥಿಕ ಹಿಂಜರಿತ ಎಂದು ಕರೆಯಬಹುದು. (ಆದರೆ, ಸತತ 5 ತ್ರೈಮಾಸಿಕಗಳಿಂದ ಜಿಡಿಪಿ ಇಳಿಯುತ್ತಿದ್ದರೂ ಕೇಂದ್ರ ಸರ್ಕಾರ ಇದುವರೆಗೂ ಇದನ್ನು ಹಿಂಜರಿತ ಎಂದು ಘೋಷಿಸಿಲ್ಲ)
ಆರ್ಥಿಕ ಹಿಂಜರಿತ ಸಂಭವಿಸಿದ್ದರೇ ಜನರ ಕೊಳ್ಳುವ ಸಾಮರ್ಥ್ಯ ಕ್ಷೀಣಿಸುತ್ತದೆ. ದೇಶೀಯ ಹಾಗೂ ವಿದೇಶಿ ಹೂಡಿಕೆಯ ಚಟುವಟಿಕೆಗಳು ಕುಂಠಿತಗೊಳ್ಳುತ್ತವೆ. ಉದ್ಯೋಗ ಕಡಿತ ಸಂಭವಿಸಿ ನಿರುದ್ಯೋಗ ಸಮಸ್ಯೆ ತಲೆ ದೋರುತ್ತದೆ. ಮಂದಗತಿಯ ಬೆಳವಣಿಗೆಯು ಜಿಡಿಪಿಯ ಇಳಿಕೆಗೆ ಕಾರಣವಾಗಲಿದೆ.
ಈ ಹಿಂದೆ 2008ರಲ್ಲಿ ಆರ್ಥಿಕ ಹಿಂಜರಿತ ಸಂಭವಿಸಿತ್ತು. ಅಮೆರಿಕದಲ್ಲಿ ಲೆಹ್ಮನ್ ಬ್ರದರ್ಸ್ ಬ್ಯಾಂಕ್ ದಿವಾಳಿ ಆಗಿರುವುದಾಗಿ ಘೋಷಿಸಿದ ನಂತರ ಅಮೆರಿಕದಲ್ಲಿ ಉದ್ಭವಿಸಿದ ಆರ್ಥಿಕ ಬಿಕ್ಕಟ್ಟು ವಿಶ್ವವನ್ನು ಆವರಿಸಿಕೊಂಡಿತು. ಕೃಷಿ ಮತ್ತು ಕೈಗಾರಿಕೆಯ ಮೇಲೆ ಕೇಂದ್ರಿತವಾಗಿದ್ದ ಭಾರತ ಇದರಿಂದ ಕ್ಷಿಪ್ರವಾಗಿ ಚೇತರಿಸಿಕೊಂಡಿತು. ಆದರೆ, ಈಗ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ದೊಡ್ಡ ಖಿನ್ನತೆ
ಪ್ರಸ್ತುತ ಆರ್ಥಿಕ ಕುಸಿತದ ಖಿನ್ನತೆಯ ಎಲ್ಲ ಸೂಚನೆಗಳು ಕಾಣಿಸಿಕೊಳ್ಳುತ್ತಿವೆ. 1929-1940ರ ಅವಧಿಯಲ್ಲಿ ಮಹಾ ಆರ್ಥಿಕ ಕುಸಿತ ಸಂಭವಿಸಿ ಜಾಗತಿಕ ಆರ್ಥಿಕತೆಯನ್ನು ಬೆಚ್ಚಿಬೀಳಿಸಿತ್ತು. ಉತ್ಪಾದನೆಯು ಅಧಿಕವಾಗಿದ್ದರೂ ಬಡತನದಲ್ಲಿದ್ದ ಜನರನ್ನು ಮೇಲೆತ್ತಲು ಆಗಲಿಲ್ಲ. ಅಮೆರಿಕದ ಷೇರು ಮಾರುಕಟ್ಟೆ ತೀರಾ ಕೆಳಮಟ್ಟ ತಲುಪಿದವು. ಷೇರುದಾರರು ಶತಕೋಟಿ ಡಾಲರ್ನಷ್ಟು ಸಂಪತ್ತು ಕಳೆದುಕೊಂಡರು. ನಿರುದ್ಯೋಗದ ದರವು ಶೇ 25ರಷ್ಟು ಮೀರಿ ದಾಟಿತು. ಹತ್ತು ವರ್ಷಗಳ ಆರ್ಥಿಕ ಹಿಂಜರಿತ ಮತ್ತು ಎರಡನೆಯ ಮಹಾಯುದ್ಧ ಸತತ ಆರು ವರ್ಷಗಳ ಕಾಲ ವಿಶ್ವವನ್ನು ಸಂಕಷ್ಟಕ್ಕೆ ದೂಡಿತ್ತು.