ನವದೆಹಲಿ:ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿ ಸದಸ್ಯತ್ವದಿಂದ ಮಾಜಿ ಪ್ರಧಾನಿ ಮತ್ತು ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ಅವರನ್ನು ಕೈಬಿಟ್ಟು, ಸಂಸದ ರಾಹುಲ್ ಗಾಂಧಿ ಅವರಿಗೆ ರಕ್ಷಣಾ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.
ವಿತ್ತ ಇಲಾಖೆಯ ಎಲ್ಲ ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಿ ಬಿಜೆಪಿಯ ಜಯಂತ್ ಸಿನ್ಹಾ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಸತ್ ಸ್ಪೀಕರ್ ಓಂ ಬಿರ್ಲಾ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಕಳೆದ ಬಾರಿ ಹಣಕಾಸು ಮತ್ತು ವಿದೇಶಾಂಗ ಸ್ಥಾಯಿ ಸಮಿತಿಗೆ ಕಾಂಗ್ರೆಸ್‌ನ ಡಾ. ಮನಮೋಹನ್ ಸಿಂಗ್ ಹಾಗೂ ರಾಹುಲ್ ಗಾಂಧಿ ಅವರನ್ನು ನೇಮಕ ಮಾಡಲಾಗಿತ್ತು. ಡಾ. ಸಿಂಗ್ ಅವರು ತಾವಾಗಿಯೇ ಹೊರಗುಳಿದಿದ್ದಾರೋ ಅಥವಾ ಬಿಜೆಪಿಯೇ ಹಣಕಾಸು ಸ್ಥಾಯಿ ಸಮಿತಿಯಿಂದ ಹೊರಗಿಟ್ಟಿದೆಯೇ ಎಂಬುದು ತಿಳಿದುಬಂದಿಲ್ಲ.
ರಾಜ್ಯಸಭೆ ಅಧ್ಯಕ್ಷ ವೆಂಕಯ್ಯನಾಯ್ಡು ಈ ಬಗ್ಗೆ ಮಾತನಾಡಿ, ಡಾ. ಮನಮೋಹನ್ ಸಿಂಗ್ ಅವರಿಗಾಗಿ ಯಾವಾಗಲೂ ಸ್ಥಾನ ಖಾಲಿ ಇರುತ್ತದೆ. ಕಾಂಗ್ರೆಸ್ ಮುಖಂಡರು ಅವರ ಹೆಸರು ಸೂಚಿಸಿದರೇ ಯಾವಾಗ ಬೇಕಾದರೂ ಅವರು ಇಚ್ಛಿಸುವ ಸ್ಥಾಯಿ ಸಮಿತಿಯಲ್ಲಿ ನೇಮಕ ಮಾಡಿಕೊಳ್ಳಲಾಗುವುದು ಎಂದಿದ್ದಾರೆ.