ವಾಷಿಂಗ್ಟನ್ :ಕೋವಿಡ್-19 ಪ್ರೇರೇಪಿತ ಬಿಕ್ಕಟ್ಟಿನಿಂದ ಅಮೆರಿಕದಲ್ಲಿ ನಿರುದ್ಯೋಗದ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ನುರಿತ ಭಾರತೀಯ ಟೆಕ್ಕಿಗಳಿಗೆ ವರದಾನವಾಗಿರುವ ವೃತ್ತಿ ಆಧಾರಿತ ಹೆಚ್-1 ಬಿ ವೀಸಾ ವಿತರಣೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲು ಟ್ರಂಪ್ ಸರ್ಕಾರ ಕಾರ್ಯನಿರತವಾಗಿದೆ ಎಂದು ವರದಿಯೊಂದು ತಿಳಿಸಿದೆ.
ಭಾರತೀಯರ ಅಮೆರಿಕ ಕನಸು ಭಗ್ನ.. ಹೆಚ್-1ಬಿ ವೀಸಾ ಮೇಲೆ ನಿಷೇಧದ ತೂಗು ಕತ್ತಿ.. - ಭಾರತೀಯ ವಲಸಿಗರು
ಹೆಚ್ -1 ಬಿ ವಲಸೆರಹಿತ ವೀಸಾ ಆಗಿದ್ದು, ತಾಂತ್ರಿಕ ವೃತ್ತಿ ಪರಿಣತಿ ಭಾರತ ಮತ್ತು ಚೀನಾದ ವಿದೇಶಿಗರನ್ನು ನೇಮಿಸಿಕೊಳ್ಳಲು ಅಮೆರಿಕ ಕಂಪನಿಗಳು ಬಳಸಿಕೊಳ್ಳುತ್ತಿವೆ. ಈ ವೀಸಾದಡಿ ಅಮೆರಿಕದಲ್ಲಿ ಸುಮಾರು 5,00,000 ವಲಸೆ ಟೆಕ್ಕಿಗಳು ಕೆಲಸ ಮಾಡುತ್ತಿದ್ದಾರೆ.
ಉದ್ಯೋಗ ವಲಸೆ ವೀಸಾ ಸಂಬಂಧಿತ ನೂತನ ಯೋಜನೆಗಳನ್ನು ಅಮೆರಿಕ ಅಧ್ಯಕ್ಷರ ಸಲಹೆಗಾರರು ರೂಪಿಸುತ್ತಿದ್ದಾರೆ. ತಾತ್ಕಾಲಿಕ ಕೆಲಸ ಆಧಾರಿತ ವೀಸಾಗಳ ವಿತರಣೆಯನ್ನು ನಿಷೇಧಿಸುವಂತಹ ನೀತಿ ಇರಲಿದೆ ಎಂದು ಇಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ. ಅಮೆರಿಕದ ಆರ್ಥಿಕತೆಯನ್ನು ಕೊರೊನಾ ವೈರಸ್ ಸ್ಥಗಿತಗೊಳಿಸಿದೆ. ಕಳೆದ ಎರಡು ತಿಂಗಳಲ್ಲಿ 33 ದಶಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಉದ್ಯೋಗ ಕಳೆದು, ನಿರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿಸಿದ್ದಾರೆ. ಐಎಂಎಫ್ ಮತ್ತು ವಿಶ್ವಬ್ಯಾಂಕ್ ಋಣಾತ್ಮಕ ಬೆಳವಣಿಗೆಯ ದರವನ್ನು ಅಂದಾಜಿಸಿವೆ.
ಎರಡನೇ ತ್ರೈಮಾಸಿಕದಲ್ಲಿ ಅಮೆರಿಕದ ಆರ್ಥಿಕತೆಯು ಶೇ.15 ರಿಂದ 20ರಷ್ಟು ಋಣಾತ್ಮಕ ಬೆಳೆವಣಿಗೆ ಸಾಧ್ಯತೆಯಿದೆ ಎಂದು ಶ್ವೇತಭವನದ ಅಧಿಕಾರಿಗಳು ಹೇಳಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಅಮೆರಿಕದ ನಿರುದ್ಯೋಗ ದರವು ಶೇ. 14.7ಕ್ಕೆ ಏರಿದೆ ಎಂದು ಮಾಸಿಕ ಉದ್ಯೋಗ ವರದಿ ಶುಕ್ರವಾರ ತಿಳಿಸಿದೆ. ಹೀಗಾಗಿ ಪರಿಣಿತ ವಲಸಿಗರಿಗೆ ತಾತ್ಕಾಲಿಕ ತಡೆಯೊಡ್ಡಲು ಹೆಚ್1ಬಿ ವೀಸಾ ನಿಷೇಧಕ್ಕೊಳಗಾಗುವ ಸಾಧ್ಯತೆ ದಟ್ಟವಾಗಿದೆ.