ನವದೆಹಲಿ: ಸ್ವೀಡನ್ನಲ್ಲಿ ನಡೆದ ನೊಬೆಲ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾರತೀಯ ಸಾಂಪ್ರದಾಯಿಕ ಶೈಲಿಯಲ್ಲಿ ಉಡುಪು ಧರಿಸಿ ಪ್ರಶಸ್ತಿ ಸ್ವೀಕರಿಸಿದ್ದ ಭಾರತ ಮೂಲದ ಅಭಿಜಿತ್ ಬ್ಯಾನರ್ಜಿ, ಅವರ ಪತ್ನಿ ಎಸ್ತರ್ ಡಪ್ಲೊ ಅವರ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
ಪಂಚೆ ಧರಿಸಿದ್ದ ಅಭಿಜಿತ್ ಹಾಗೂ ಸೀರೆ ಧರಿಸಿದ್ದ ಡಪ್ಲೊ ಅವರ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಬಹುವಾಗಿ ಮೆಚ್ಚಿಕೊಂಡಿದ್ದರು. 'ವಿಶ್ವದ ಪ್ರತಿಯೊಂದು ವ್ಯವಸ್ಥೆಯು ಪ್ರತಿಯೊಬ್ಬ ವ್ಯಕ್ತಿಗೆ ಒಂದು ಘನ ನಂಬಿಕೆಯಂತೆ ಘನತೆಯನ್ನು ಖಚಿತಪಡಿಸುತ್ತದೆ' ಎಂದು ನೊಬೆಲ್ ಪುರಸ್ಕೃತ ದಂಪತಿಗಳು ಹೇಳಿದರು.
ಆರ್ಥಿಕವಾಗಿ ಹಿಂದುಳಿದವರನ್ನು ವೈಫಲ್ಯ ಹೊಂದಿದವರು ಎಂದು ಪರಿಗಣಿಸಲು ಸಾಧ್ಯವಿಲ್ಲ. ಅದು ದೊಡ್ಡ ಗೆಲುವಿನ ವಿಧಾನವಾಗಿರುತ್ತದೆ ಎಂದು 'ಗುಡ್ ಎಕನಾಮಿಕ್ಸ್ ಫಾರ್ ಹಾರ್ಡ್ ಟೈಮ್ಸ್' ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಬ್ಯಾನರ್ಜಿ ಹೇಳಿದರು.
ಬಡವರಿಗೆ ಸ್ವತ್ತುಗಳನ್ನು ನೀಡಿದರೆ, ಉದಾ; ಹಸು, ಮೇಕೆಗಳು ಮತ್ತು ವ್ಯವಹಾರ ಆರಂಭಿಸಲು ಕೆಲ ಸಮಯದವರೆಗೆ ತರಬೇತಿ ಒದಗಿಸಿದರೆ ಅವರು ತಮ್ಮ ಕಾಲು ಮೇಲೆ ತಾವು ನಿಂತು ತಮ್ಮ ವಿಶ್ವಾಸವನ್ನು ಬೆಳೆಸಿಕೊಳ್ಳುತ್ತಾರೆ. ಇದನ್ನು ಮೊದಲು ಬಾಂಗ್ಲಾದಲ್ಲಿ ಅನುಷ್ಠಾನಕ್ಕೆ ತಂದಿದ್ದೇವೆ. ಬಳಿಕ ಇತರ ಏಳು ದೇಶಗಳಲ್ಲಿ ಜಾರಿಗೆ ತಂದಿದ್ದೇವೆ ಎಂದು ಬ್ಯಾನರ್ಜಿ ಹೇಳಿದರು.