ಕರ್ನಾಟಕ

karnataka

ETV Bharat / business

ಆ್ಯಪ್ ಆಧಾರಿತ ಸಾವಿರಾರು ಸೇವೆಗಳು ಸ್ಥಗಿತ: ಡಿಜಿಟಲ್​ ಇಂಡಿಯಾಗೆ ಕೊರೊನಾ ಗುದ್ದು - ಸಾಲದ ಕಂತು

ಲಾಕ್​ಡೌನ್​ ಹಲವಾರು ಆಯಾಮಗಳಲ್ಲಿ ಅರ್ಥವ್ಯವಸ್ಥೆಗೆ ಹೊಡೆತ ನೀಡುತ್ತಿದೆ. ಅದರಲ್ಲೂ ಡಿಜಿಟಲ್​ ಇಂಡಿಯಾಗೆ ಇದರ ಪೆಟ್ಟು ಜಾಸ್ತಿ ಬಿದ್ದಿದೆ. ಲಾಕ್​ಡೌನ್​ನಿಂದ ಆ್ಯಪ್​ ಆಧಾರಿತ ಡೆಲಿವರಿ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಈ ವಲಯದ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

Digital India faces its biggest test amid lockdown
Digital India faces its biggest test amid lockdown

By

Published : Apr 1, 2020, 12:27 PM IST

ಹೊಸದಿಲ್ಲಿ: ನಾಗರಿಕರ ದಿನನಿತ್ಯದ ಜೀವನವನ್ನು ಸುಲಭಗೊಳಿಸಲು, ಹಣಕಾಸು ವ್ಯವಹಾರಗಳನ್ನು ತ್ವರಿತ ಹಾಗೂ ಪಾರದರ್ಶಕ ರೀತಿಯಲ್ಲಿ ನಿಭಾಯಿಸಲು ಹಾಗೂ ಇನ್ನೂ ಹಲವಾರು ಸೇವೆಗಳನ್ನು ಬೆರಳ ತುದಿಯಲ್ಲೇ ಪಡೆಯಬಹುದಾದ ಮಹತ್ವಾಕಾಂಕ್ಷಿ ಯೋಜನೆ ಡಿಜಿಟಲ್ ಇಂಡಿಯಾ. ಆದರೆ ಈಗ ಕೊರೊನಾ ಲಾಕ್​ಡೌನ್​ನಿಂದಾಗಿ ಡಿಜಿಟಲ್​ ಇಂಡಿಯಾ ಬೆಟ್ಟದಷ್ಟು ಸವಾಲುಗಳನ್ನು ಎದುರಿಸುವಂತಾಗಿರುವುದು ಮಾತ್ರ ಸತ್ಯ.

ಸಾವಿರಾರು ಆ್ಯಪ್ ಆಧರಿತ ಸೇವೆಗಳು ಸ್ಥಗಿತ:

ಮನೆಯಲ್ಲೇ ಕುಳಿತು ದಿನಸಿ ಅಥವಾ ಇನ್ನಾವುದೋ ಅಗತ್ಯ ವಸ್ತುಗಳನ್ನು ಒಂದು ಆ್ಯಪ್​ ಮೂಲಕ ಆರ್ಡರ್ ಮಾಡಿದರೆ ಸಾಕು, ಬೇಕಾದ ವಸ್ತು ಮನೆ ಬಾಗಿಲಿಗೇ ಬರುತ್ತಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಡಿಜಿಟಲ್​ ಇಂಡಿಯಾದ ಬಹುತೇಕ ಸೌಲಭ್ಯಗಳು ಸ್ಥಗಿತಗೊಂಡಿವೆ. ಇದನ್ನೇ ನಂಬಿಕೊಂಡಿದ್ದ ಲಕ್ಷಾಂತರ ಜನ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಉಬರ್, ಓಲಾ, ಸ್ವಿಗ್ಗಿ, ಜೊಮ್ಯಾಟೊ, ಬಿಗ್​ ಬಾಸ್ಕೆಟ್​, ಗ್ರೋಫರ್ಸ್​, ಫ್ಲಿಪ್​ಕಾರ್ಟ್​, ಅಮೆಜಾನ್​ ಹೀಗೆ ಒಂದಲ್ಲ ಎರಡಲ್ಲ ಸಾವಿರಾರು ಆ್ಯಪ್ ಆಧರಿತ ಸೇವೆಗಳು ನಿಂತು ಹೋಗಿವೆ. ಈಗ ಈ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದವರ ಭವಿಷ್ಯದ ಮೇಲೆ ಕಾರ್ಮೋಡ ಕವಿದಿದೆ.

ಜೊಮ್ಯಾಟೊ ಆ್ಯಪ್​ ಸೇವೆಗಳು ಸ್ಥಗಿತಗೊಂಡಿದ್ದರಿಂದ ಸಂಸ್ಥೆಯ ಹಲವಾರು ಉದ್ಯೋಗಿಗಳು ತಾವಾಗಿಯೇ ಸಂಬಳ ಕಡಿತ ಮಾಡುವಂತೆ ಕಂಪನಿಗೆ ಮನವಿ ಮಾಡಿದ್ದಾರೆ ಎಂದು ಜೊಮ್ಯಾಟೊ ಸಿಇಓ ದೀಪಿಂದರ್ ಗೋಯಲ್ ಹೇಳಿದ್ದಾರೆ.

ಉಬರ್ ಹಾಗೂ ಓಲಾ ಸೇವೆಯಿಲ್ಲ:

ಇನ್ನು ಉಬರ್ ಹಾಗೂ ಓಲಾ ಡ್ರೈವರ್​ಗಳು ಕೆಲಸವಿಲ್ಲದೆ ಮನೆಯಲ್ಲೇ ಕುಳಿತಿದ್ದಾರೆ. ಸಾಲ ಮಾಡಿ ಕಾರು ಕೊಂಡು ಉಬರ್ ಅಥವಾ ಓಲಾಗೆ ಅಟ್ಯಾಚ್​ ಮಾಡಿದವರು ಈ ತಿಂಗಳ ಸಾಲದ ಕಂತು ಕಟ್ಟುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.

ಲಕ್ಷಾಂತರ ಡೆಲಿವರಿ ಬಾಯ್ಸ್‌ಗೆ ಕೆಲಸವಿಲ್ಲ:

ಲಾಕ್​ಡೌನ್​ನಿಂದ ಊಟ ವಸತಿಗೆ ಪರದಾಡುವಂತಾಗಿದ್ದರಿಂದ ಲಕ್ಷಾಂತರ ಡೆಲಿವರಿ ಬಾಯ್​ಗಳು ಮೆಟ್ರೊ ಸಿಟಿಗಳನ್ನು ತೊರೆದು ತಮ್ಮೂರು ಸೇರಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಮತ್ತೆ ಹೊಸ ನೌಕರರನ್ನು ಹುಡುಕಿ ಸೇವೆಗಳನ್ನು ಸುಸೂತ್ರಗೊಳಿಸುವುದು ಕಂಪನಿಗಳಿಗೂ ದೊಡ್ಡ ಸವಾಲಾಗಿದೆ.

ಬಿಗ್ ಬಾಸ್ಕೆಟ್​ ಹಾಗೂ ಗ್ರೋಫರ್ಸ್​ನಂಥ ದಿನಸಿ ಡೆಲಿವರಿ ಮಾಡುವ ಕಂಪನಿಗಳ ಕತೆ ಇನ್ನೊಂದು ರೀತಿಯದ್ದಾಗಿದೆ. ಲಾಕ್​ಡೌನ್​ನಲ್ಲಿ ಮನೆ ಮನೆಗೆ ದಿನಸಿ ಪೂರೈಸಲು ಇವರಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಬರುತ್ತಿರುವ ವಿಪರೀತ ಆರ್ಡರ್​ಗಳನ್ನು ಡೆಲಿವರಿ ಮಾಡಲು ಹುಡುಗರೇ ಇಲ್ಲದಂಥ ಪರಿಸ್ಥಿತಿ ಇವರದು.

ಆನ್ಲೈನ್​ ಆಧಾರಿತ ವ್ಯವಹಾರಗಳು ಭಾರಿ ಹೊಡೆತ:

ಒಟ್ಟಾರೆಯಾಗಿ ನೋಡಿದರೆ ಆನ್ಲೈನ್​ ಆಧರಿತ ವ್ಯವಹಾರಗಳು ಭಾರಿ ಹೊಡೆತ ಅನುಭವಿಸುತ್ತಿದ್ದು, ಇನ್ನು ಕೆಲ ದಿನ ಪರಿಸ್ಥಿತಿ ಹೀಗೇಯೇ ಮುಂದುವರೆದಲ್ಲಿ ಈ ಕಂಪನಿಗಳು ತಾತ್ಕಾಲಿಕವಾಗಿಯಾದರೂ ಬಾಗಿಲು ಮುಚ್ಚುವ ಸಂದರ್ಭ ಬರಬಹುದು. ಈಗಲಾದರೂ ಕೇಂದ್ರ ಸರಕಾರ ಈ ಬಗ್ಗೆ ಗಮನಹರಿಸಿ ಆನ್ಲೈನ್​ ಉದ್ಯಮದ ಬೆಂಬಲಕ್ಕೆ ನಿಲ್ಲಬೇಕಿದೆ.

For All Latest Updates

ABOUT THE AUTHOR

...view details