ನವದೆಹಲಿ:ಕೊರೊನಾ ಪ್ರೇರೇಪಿತ ಲಾಕ್ಡೌನ್ ಹಾಗೂ ಕೊರೊನಾ ಪೂರ್ವದ ಜನರ ಉಪಭೋಗದ ಕುಸಿತದ ಪ್ರಭಾವದಿಂದ ದೇಶದ ಆರ್ಥಿಕತೆ ದಾಖಲೆಯ ಪ್ರಮಾಣದಲ್ಲಿ ಕ್ಷೀಣಿಸಿದೆ. ಪ್ರತಿಪಕ್ಷಗಳು ಆಗಾಗ ಕೇಂದ್ರದ ವಿತ್ತೀಯ ನೀತಿಗಳನ್ನು ಟೀಕಿಸಿಕೊಂಡು ಬರುತ್ತಿವೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೂಡ ತೀಕ್ಷ್ಣವಾಗಿ ಆರೋಪ ಮಾಡಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಜಿಡಿಪಿಗೆ ಸಂಬಂಧಿಸಿದ ದತ್ತಾಂಶವು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಆರ್ಥಿಕತೆಯು 2020-21ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ 23.9ರಷ್ಟು ಕುಗ್ಗಿದೆ. ಇದು ಸುಮಾರು 40 ವರ್ಷಗಳಲ್ಲೇ ಮೊದಲ ಬಾರಿಗೆ ಸಂಕುಚಿತಗೊಂಡಿದೆ.
ಈ ಬಳಿಕ ಪ್ರತಿಪಕ್ಷಗಳು ಕೇಂದ್ರದ ನಡೆಯನ್ನು ಕಟುವಾಗಿ ಟೀಕಿಸಲು ಆರಂಭಿಸಿವೆ. ಖಾಲಿ ಘೋಷಣೆ ಬದಲು ಯುವಕರಿಗೆ ಉದ್ಯೋಗ ನೀಡಿ ಎಂದಿದ್ದ ರಾಹುಲ್ ಗಾಂಧಿ, ಇಂದು ಕೇಂದ್ರದ ಆರ್ಥಿಕ ನಡೆ ಖಂಡಿಸಿ ವಿಡಿಯೋ ಒಂದನ್ನು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಮೋದಿಜೀ ಅವರ 'ನಗದು ರಹಿತ ಭಾರತ' ನಿಜವಾಗಿಯೂ ಕಾರ್ಮಿಕ, ರೈತ, ಸಣ್ಣ ವ್ಯಾಪಾರಿಗಳ ಮುಕ್ತ ಭಾರತವಾಗಿದೆ. 2016ರ ನವೆಂಬರ್ 8ರಂದು ತೆಗೆದುಕೊಂಡ ಭೀಕರ ನೋಟುರದ್ದತಿ ಪರಿಣಾಮ 2020ರ ಆಗಸ್ಟ್ 31ರಂದು ಅನಾವರಣಗೊಂಡಿತು ಎಂದು ಟ್ವೀಟ್ ಮಾಡಿದ್ದಾರೆ.