ನವದೆಹಲಿ:ದೆಹಲಿ ನಗರದಾದ್ಯಂತ ನಾಗರಿಕರು ಪ್ರತಿ ತಿಂಗಳು 15 ಜಿಬಿ ವೈಫೈ ಡೇಟಾವನ್ನು ಉಚಿತವಾಗಿ ಪಡೆಯಬಹುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ದೆಹಲಿ ರಾಜ್ಯ ಸರ್ಕಾರವು ಸುಲಭವಾಗಿ ಡೇಟಾ ಲಭ್ಯವಾಗುವಂತೆ ರಾಷ್ಟ್ರ ರಾಜಧಾನಿಯಾದ್ಯಂತ 11,000 ವೈಪೈ ಕೇಂದ್ರಗಳನ್ನು ಸ್ಥಾಪಿಸಲಿದೆ. ಇದರಲ್ಲಿ 4,000 ಕೇಂದ್ರಗಳು ಬಸ್ ನಿಲ್ದಾಣ ಹಾಗೂ 7,000 ಮಾರುಕಟ್ಟೆ ಪ್ರದೇಶಗಳಲ್ಲಿ ಇರಲಿವೆ.
ರಾಜ್ಯ ಸರ್ಕಾರದ ವೈಫೈ ಉಚಿತ ಡೇಟಾ ಯೋಜನೆಗೆ ₹ 100 ಕೋಟಿ ವಿನಿಯೋಗಿಸಿದ್ದು, ಡಿಸೆಂಬರ್ 16ರಿಂದ ಅನುಷ್ಠಾನಕ್ಕೆ ತರುತ್ತಿದೆ. ಅಂದು 100 ಹಾಟ್ಸ್ಪಾಟ್ ಕೇಂದ್ರಗಳಿಗೆ ಚಾಲನೆ ನೀಡಿಲಿದೆ. ಪ್ರತಿ ವಾರದಲ್ಲಿ 500 ವೈಫೈ ಹಾಟ್ಸ್ಪಾಟ್ ಕೇಂದ್ರಗಳನ್ನು ತೆರೆದು ಮುಂದಿನ ಆರು ತಿಂಗಳಲ್ಲಿ 11,000 ಕೇಂದ್ರಗಳನ್ನು ತೆರೆಯುವ ಗುರಿಯನ್ನು ಅದು ಇರಿಸಿಕೊಂಡಿದೆ.
ನಗರದಾದ್ಯಂತ ಫ್ರೀ ವೈ-ಫೈ ಯೋಜನೆ ಜಾರಿಗೆ ತರುವುದಾಗಿ ಆಪ್, 2015ರ ವಿಧಾನಸಭಾ ಚುನಾವಣಾ ವೇಳೆ ಭರವಸೆ ನೀಡಿತ್ತು. ಮೊದಲ ನಾಲ್ಕು ವರ್ಷಗಳ ಅವಧಿಯಲ್ಲಿ ಈ ಯೋಜನೆ ಜಾರಿಗೆ ತರಲು ಸಾಧ್ಯವಾಗಿಲ್ಲ. ನಗರದಾದ್ಯಂತ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆಯು ಶೈಕ್ಷಣಿಕ ಸುಧಾರಣೆ, ವ್ಯವಹಾರ, ಉದ್ಯೋಗ ಸೃಷ್ಟಿ ಮತ್ತು ಮಹಿಳೆಯರ ಸುರಕ್ಷತೆಗೆ ನೆರವಾಗಲಿದೆ ಎಂದು ಸಿಎಂ ಹೇಳಿದರು.