ನವದೆಹಲಿ: ದೇಶದಲ್ಲಿ ಇಂಟರ್‌ನೆಟ್ ಆಫ್ ಥಿಂಗ್ಸ್ (ಐಒಟಿ) ಗುರಿಯಾಗಿಸಿಕೊಂಡು ಸೈಬರ್ ಆಕ್ರಮಣಗಳ ಪ್ರಮಾಣ ಶೇ 22ರಷ್ಟು ಏರಿಕೆ ಕಂಡಿದೆ.
ಕಳೆದ ತ್ರೈಮಾಸಿಕದಲ್ಲಿ ಐಒಟಿ ಸೈಬರ್ ಅಟ್ಯಾಕ್ಗಳಲ್ಲಿ ಹೆಚ್ಚು ಬಾಧಿತವಾದ ರಾಷ್ಟ್ರಗಳ ಸಾಲಿನಲ್ಲಿ ಭಾರತ ಮುಂಚೂಣಿಯಲ್ಲಿದೆ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
ಬಹುತೇಕ ದಾಳಿಗಳು ಸ್ಮಾರ್ಟ್ ಸಿಟಿ, ಹಣಕಾಸು ಸೇವೆ ಮತ್ತು ಸಾರಿಗೆ ವಲಯಗಳ ಮೇಲೆ ನಡೆಯುತ್ತಿವೆ ಎಂದು ಸ್ಟೇಟ್ ಆಫ್ ಇಂಟರ್‌ನೆಟ್ ಆಫ್ ಥಿಂಗ್ಸ್ (ಐಒಟಿ) ಭದ್ರತೆ ಎಂಬ ಶೀರ್ಷಿಕೆಯಡಿ ಪ್ರಕಟವಾದ ವರದಿಯಲ್ಲಿ ಉಲ್ಲೇಖವಾಗಿದೆ.
ವರದಿ ತಯಾರಿಕೆಗೆ ಭಾರತದ ಅಗ್ರ 15 ನಗರಗಳಲ್ಲಿನ ಸೈಬರ್ ಆಕ್ರಮಣದ ದತ್ತಾಂಶಗಳನ್ನು ಸಂಗ್ರಹಿಸಲಾಗಿದ್ದು, ಇದರಲ್ಲಿ ಮುಂಬೈ, ನವದೆಹಲಿ ಮತ್ತು ಬೆಂಗಳೂರು ಗರಿಷ್ಠ ಸಂಖ್ಯೆಯ ಸೈಬರ್ ಅಟ್ಯಾಕಗಳನ್ನು ಆಕರ್ಷಿಸುತ್ತಿವೆ ಎಂದು ಬೆಂಗಳೂರಿನ ಟೆಲಿಕಾಂ ಪರಿಹಾರ ಪೂರೈಕೆದಾರ ಸುಬೆಕ್ಸ್ ಸಂಸ್ಥೆ ನಡೆಸಿದ ಅಧ್ಯಯನವು ಬಹಿರಂಗಪಡಿಸಿದೆ.