ನವದೆಹಲಿ: ಸಾಂಕ್ರಾಮಿಕ ರೋಗದ ಮಧ್ಯೆ ಬಜೆಟ್ ದಾಖಲೆಗಳನ್ನು ಮುದ್ರಿಸದಿರಲು ಹಣಕಾಸು ಸಚಿವಾಲಯ ನಿರ್ಧರಿಸಿದ್ದರಿಂದ ಫೆಬ್ರವರಿ 1ರ ಬಜೆಟ್ ಕಾಗದರಹಿತವಾಗಿರಲಿದೆ.
ಇದು ಐತಿಹಾಸಿಕ ಕ್ರಮವಾಗಿದ್ದು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಬಜೆಟ್ ಪತ್ರಿಕೆಗಳನ್ನು ಮುದ್ರಿಸಲಾಗುವುದಿಲ್ಲ. ಸಂಸತ್ತಿನ ಉಭಯ ಸದನಗಳಿಂದ ಸರ್ಕಾರ ಇದಕ್ಕೆ ಅನುಮತಿ ಪಡೆದಿದೆ ಎಂದು ಮೂಲಗಳು ತಿಳಿಸಿವೆ.
1860ರ ಏಪ್ರಿಲ್ 7ರಂದು ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದ ಬಜೆಟ್ ಅನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು. ಅಂದಿನ ಹಣಕಾಸು ಸಚಿವ ಜೇಮ್ಸ್ ವಿಲ್ಸನ್ ಅವರು ಬಜೆಟ್ ರಚಿಸಿದ್ದರು. ಅಲ್ಲಿಂದ ಇಲ್ಲಿಯ ತನಕ ಬಜೆಟ್ ಪ್ರತಿಗಳನ್ನು ಮುದ್ರಿಸಿ ಮಂಡನೆ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಕಾಗದ ರಹಿತವಾಗಿ ಮಂಡನೆ ಆಗಲಿದೆ.