ನವದೆಹಲಿ: ಕೋವಿಡ್-19ರ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಬಡವರು ಮತ್ತು ಕೈಗಾರಿಕೆಗಳಿಗೆ ನೆರವಾಗಲು ಶೀಘ್ರದಲ್ಲೇ ಹೊಸ ಪರಿಹಾರ ಕ್ರಮಗಳು ಹಾಗೂ ಆರ್ಥಿಕ ಉತ್ತೇಜನಗಳನ್ನು ಪ್ರಕಟಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಶ್ವ ಬ್ಯಾಂಕಿನ ಅಭಿವೃದ್ಧಿ ಸಮಿತಿಯ 101ನೇ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸೀತಾರಾಮನ್, ಕೋವಿಡ್ -19ರ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ದೇಶಗಳಿಗೆ ಭಾರತವು ಔಷಧಗಳನ್ನು ಪೂರೈಸುತ್ತಲೇ ಇರುತ್ತದೆ ಎಂದು ಜಾಗತಿಕ ಸಮುದಾಯಕ್ಕೆ ಭರವಸೆ ನೀಡಿದರು.
ಕಳೆದ ತಿಂಗಳು ಘೋಷಿಸಿದ 23 ಬಿಲಿಯನ್ ಡಾಲರ್ (1.70 ಲಕ್ಷ ಕೋಟಿ ರೂ.) ಆರ್ಥಿಕ ಪುನಶ್ಚೇತನದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಉಚಿತ ಆರೋಗ್ಯ ವಿಮೆ ಸೇರಿದಂತೆ ಬಡವರಿಗೆ ನಗದು ವರ್ಗಾವಣೆ, ಉಚಿತ ಆಹಾರ ಮತ್ತು ಅನಿಲ ವಿತರಣೆ, ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಕ್ರಮಗಳಂತಹ ಜನಪರ ಪರಿಹಾರಗಳು ಒಳಗೊಂಡಿದ್ದವು ಎಂದರು.
ಎಸ್‌ಎಂಇ ಕಂಪನಿಗಳಿಗೆ ಹಠಾತ್ ನಷ್ಟ ನಿಭಾಯಿಸಲು ಆದಾಯ ತೆರಿಗೆ, ಜಿಎಸ್‌ಟಿ, ಕಸ್ಟಮ್ಸ್, ಹಣಕಾಸು ಸೇವೆ ಮತ್ತು ಸಾಂಸ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪರಿಹಾರ ನೀಡಿದ್ದೇವೆ ಎಂದು ಹೇಳಿದರು.
ಸೆಂಟ್ರಲ್ ಬ್ಯಾಂಕ್, ಮಾರುಕಟ್ಟೆಯಲ್ಲಿನ ಚಂಚಲತೆ ಕಡಿಮೆ ಮಾಡಲು ತನ್ನದೆ ಆದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಮಾನವೀಯ ನೆರವಿನ ರೂಪದಲ್ಲಿ ಹೆಚ್ಚುವರಿ ಪರಿಹಾರ ಒದಗಿಸಲಿದೆ. ಮುಂದಿನ ದಿನಗಳಲ್ಲಿ ಆರ್ಥಿಕತೆಯ ಪ್ರಚೋದನೆಗೆ ಸರ್ಕಾರವು ಮಧ್ಯಸ್ಥಗಾರರೊಂದಿಗೆ ವ್ಯಾಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸೀತಾರಾಮನ್ ಹೇಳಿದರು.
ಜನಸಂಖ್ಯೆಯ ಗಾತ್ರ ಗಮನಿಸಿದರೆ ಭಾರತವು ಜಾಗತಿಕವಾಗಿ ಕೋವಿಡ್ ಹಾಟ್‌ಸ್ಪಾಟ್ ಕೇಂದ್ರ ಆಗಬಹುದಿತ್ತು. ಅಂತಹ ಯಾವುದೇ ಅಪಾಯಕ್ಕೆ ಅವಕಾಶ ಮಾಡಿಕೊಡಲಿಲ್ಲ. ದೇಶದ ಆರೋಗ್ಯ ವ್ಯವಸ್ಥೆಯು ಈ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಸ್ಪಂದಿಸಲು ಸರ್ಕಾರವು ದೊಡ್ಡ ಮಟ್ಟದ ಪ್ರಯತ್ನಗಳನ್ನು ಆರಂಭಿಕ ಹಂತದಲ್ಲಿ ಕೈಗೆತ್ತಿಕೊಂಡಿತ್ತು ಎಂದರು.
ಅವುಗಳಲ್ಲಿ ಮುಖ್ಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸಂಚಾರ ನಿರ್ಬಂಧ, ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ವರ್ಕ್ ಫ್ರಮ್ ಹೋಮ್, ತ್ವರಿತ ತಪಾಸಣೆ, ಚಿಕಿತ್ಸೆ ಕೇಂದ್ರಗಳ ಸಿದ್ಧತೆಯನ್ನು ಪರಿಣಾಮಕಾರಿಯಾಗಿ ತೆರಯಲಾಯಿತು. ಇದರ ಜೊತೆಗೆ ಜಾಗತಿಕ ಸಮುದಾಯದ ಜವಾಬ್ದಾರಿಯುತ ನಾಗರಿಕರಾಗಿ, ಅಗತ್ಯವಿರುವ ದೇಶಗಳಿಗೆ ಔಷಧಗಳನ್ನು ಪೂರೈಸುತ್ತಿದ್ದೇವೆ. ಇನ್ನಷ್ಟು ಬೇಡಿಕೆ ಇದ್ದರೆ ಈಗಿನಂತೆ ಪೂರೈಕೆ ಮುಂದುವರಿಸುತ್ತೇವೆ ಎಂದು ಸೀತಾರಾಮನ್ ಆಶ್ವಾಸನೆ ನೀಡಿದ್ದಾರೆ.