ನವದೆಹಲಿ: ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು (ಡಿಪಿಐಐಟಿ) ಕೊರೊನಾ ವೈರಸ್ ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳ ಸಾಗಣೆ ಮತ್ತು ವಿತರಣೆಯ ನೈಜ ಸ್ಥಿತಿಯ ಮೇಲ್ವಿಚಾರಣೆಗೆ ನಿಯಂತ್ರಣ ಕೊಠಡಿಯನ್ನು ತೆರೆದಿದೆ.
ದೇಶಾದ್ಯಂತ ವಿಧಿಸಿರುವ ಲಾಕ್ಡೌನ್ನಿಂದಾಗಿ ನಾಗರಿಕರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಾರ್ಚ್ 25ರಿಂದ ಏಪ್ರಿಲ್ 14ರವರೆಗಿನ ಲಾಕ್ ಡೌನ್ ಅವಧಿಯಲ್ಲಿ ಮಧ್ಯಸ್ಥಗಾರನಾಗಿ ಇದು ಕಾರ್ಯ ನಿರ್ವಹಿಸಲಿದೆ.
ಯಾವುದೇ ಉತ್ಪಾದನೆ, ಸಾಗಣೆದಾರರು, ವಿತರಕರು, ಸಗಟು ವ್ಯಾಪಾರಿ ಅಥವಾ ಇ-ಕಾಮರ್ಸ್ ಕಂಪನಿಗಳು ಸರಕು ಸಾಗಣೆ ಮತ್ತು ವಿತರಣೆಯಲ್ಲಿ ಅಥವಾ ಸಂಪನ್ಮೂಲಗಳ ಕ್ರೋಢೀಕರಣದಲ್ಲಿ ತಳಮಟ್ಟದ ತೊಂದರೆಗಳನ್ನು ಎದುರಿಸುತ್ತಿದ್ದರೆ, ಅವುಗಳ ಬಗ್ಗೆ ಡಿಪಿಐಐಟಿಗೆ ತಿಳಿಸಬಹುದು ಎಂದು ಡಿಪಿಐಐಟಿ ಹೇಳಿದೆ.
ಕುಂದುಕೊರತೆಗಳನ್ನು "controlroom-dpiit@gov.in"ಗೆ ಇ-ಮೇಲ್ ಮಾಡಬಹುದು ಅಥವಾ ದೂರವಾಣಿ ಮೂಲಕ ತಿಳಿಸಬಯಸುವವರು 011-23062487ಗೆ ಕರೆ ಮಾಡಬಹುದು. ಬೆಳಗ್ಗೆ 8ರಿಂದ ಸಂಜೆ 6 ರವರೆಗೆ ಕಾರ್ಯನಿರ್ವಹಿಸುತ್ತದೆ.
ಈ ನಿಯಂತ್ರಣ ಕೊಠಡಿಯ ಮೂಲಕ ವಿವಿಧ ಪಾಲುದಾರರು ವರದಿ ಮಾಡಿದ ಸಮಸ್ಯೆಗಳನ್ನು ಸಂಬಂಧಪಟ್ಟ ರಾಜ್ಯ ಸರ್ಕಾರ, ಜಿಲ್ಲೆ, ಪೊಲೀಸ್ ಅಧಿಕಾರಿಗಳು ಮತ್ತು ಇತರ ಏಜೆನ್ಸಿಗಳೊಂದಿಗೆ ಪರಿಹರಿಸಲಾಗುವುದು.
ವ್ಯಾಪಾರಿಗಳು ಮತ್ತು ಇ-ಕಾಮರ್ಸ್ ಕಂಪನಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವಾಗ ವಿವಿಧ ರಾಜ್ಯಗಳಲ್ಲಿ ಡೆಲಿವರಿ ಹುಡುಗರ ಮೇಲೆ ಹಲ್ಲೆಯಂತಹ ಘಟನೆಗಳ ನಡಯುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದವು. ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ದೇಶದಲ್ಲಿ ಅಗತ್ಯ ವಸ್ತುಗಳ ಸುಗಮ ಪೂರೈಕೆ ಕುರಿತು ಡಿಪಿಐಐಟಿ, ವ್ಯಾಪಾರಿಗಳು ಮತ್ತು ಇ-ಕಾಮರ್ಸ್ ಸಂಸ್ಥೆಗಳೊಂದಿಗೆ ಬುಧವಾರ ಸಭೆ ನಡೆಸಿ ಸುದೀರ್ಘವಾಗಿ ಚರ್ಚಿಸಿದ್ದರು.