ತಿರುಪತಿ: ದೇಶದ 'ಶ್ರೀಮಂತ' ದೇಗುಲವಾದ ತಿರುಪತಿ ಶ್ರೀ ವೆಂಕಟೇಶ್ವರ ದೇಗುಲದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್, ಲಾಕ್‌ಡೌನ್ ವೇಳೆ ಹುಂಡಿ ಹಣ ಸಂಗ್ರಹದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದರೂ ತನ್ನ ಸುಮಾರು 23,000 ಸಿಬ್ಬಂದಿಯ ವೇತನ ಕಡಿತಕ್ಕೆ ಮುಂದಾಗಿಲ್ಲ.
ರಾಷ್ಟ್ರವ್ಯಾಪಿ ಲಾಕ್ಡೌನ್ನಿಂದಾಗಿ ದೇವಸ್ಥಾನಗಳಿಗೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಇದರಿಂದ ಹುಂಡಿಯ ಹಣ ಸಂಗ್ರಹ ಕ್ಷೀಣಿಸಿದೆ. ದೇವಾಲಯವು ತನ್ನ 8,000 ಕಾಯಂ ಉದ್ಯೋಗಿಗಳಿಗೆ ಆಹಾರ ಒದಗಿಸಲು ಸ್ಥಿರ ಠೇವಣಿಗಳ ಮೇಲಿನ ಬಡ್ಡಿಯ ಇತರ ಆದಾಯದ ಮೂಲಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ. ಬೆಟ್ಟದ ಮೇಲಿನ ದೇಗುಲದಲ್ಲಿ 15,000 ಹೊರ ಗುತ್ತಿಗೆ ಸಿಬ್ಬಂದಿ ದುಡಿಯುತ್ತಿದ್ದಾರೆ.