ಮುಂಬೈ: ದೇಶಾದ್ಯಂತ ಜಾರಿಯಲ್ಲಿರುವ 3ನೇ ಹಂತದ ಲಾಕ್ಡೌನ್ ಅಂತ್ಯಕ್ಕೆ ಕೆಲವು ದಿನಗಳಷ್ಟೇ ಬಾಕಿ ಉಳಿದಿದೆ. ವಿಶೇಷ ರೈಲ್ವೆ, ಕೆಲ ರಾಜ್ಯಗಳಲ್ಲಿ ನಿಬಂಧನೆಗೆ ಒಳಪಟ್ಟ ಅಂತರ್ ರಾಜ್ಯ ಬಸ್ ಸೇವೆ ಆರಂಭವಾಗಿದೆ. ವಾಣಿಜ್ಯ ವಿಮಾನ ಹಾರಾಟದ ಚಾಲನೆಯ ಸುಳಿವು ಸಹ ಸಿಕ್ಕಿದೆ.
ಕೋವಿಡ್-19ಗೆ ಸಂಬಂಧಿಸಿದ ವಿವರವಾದ ಪ್ರಶ್ನಾವಳಿ ಭರ್ತಿ, ಕ್ಯಾಬಿನ್ ಸಾಮಗ್ರಿ ಸಾಗಣೆ, ಆರೋಗ್ಯ ಸೇತು ಅಪ್ಲಿಕೇಷನ್ ಬಳಕೆ, ವಿಮಾನ ನಿರ್ಗಮನಕ್ಕೆ ಕನಿಷ್ಠ ಎರಡು ಗಂಟೆಗಳ ಮೊದಲು ನಿಲ್ದಾಣ ತಲುಪುವಂತಹ ಮಾರ್ಗಸೂಚಿಗಳನ್ನು ನಾಗರಿಕ ವಿಮಾನಯಾನ ಸಚಿವಾಲಯ ಸಲಹೆ ಸಿದ್ಧಪಡಿಸಿದೆ.
ಸಂಭವನೀಯ ಸೋಂಕು ತಡೆಗಟ್ಟಲು ಸಾಧ್ಯವಾದಷ್ಟು ಒಂದೇ ರೀತಿಯ ಕ್ಯಾಬಿನ್ ಮತ್ತು ಕಾಕ್‌ಪಿಟ್ ಸಿಬ್ಬಂದಿಯನ್ನು ರೋಸ್ಟರಿಂಗ್ ಮಾಡಲು ಮುಂದಾಗಿದೆ. ವಿಮಾನ ನಿಲ್ದಾಣ ಪ್ರವೇಶ ದ್ವಾರಗಳಲ್ಲಿ ಗುರುತಿನ ಚೀಟಿ ತಪಾಸಣೆ ನಿರ್ಬಂಧ, ಸಾಮಾಜಿಕ ಅಂತರದ ಅಗತ್ಯತೆ ಸೇರಿದಂತೆ ಭದ್ರತಾ ಏಜೆನ್ಸಿಗಳು ಮತ್ತು ವಿಮಾನ ನಿಲ್ದಾಣ ನಿರ್ವಾಹಕರು ಅನುಸರಿಸಬಹುದಾದ ಕ್ರಮಗಳನ್ನು ಸಹ ಕರಡು ಎಸ್‌ಒಪಿ ಸೂಚಿಸಿದೆ.
ವೈದ್ಯಕೀಯ ತುರ್ತುಸ್ಥಿತಿ ಹೊಂದಿರುವ ಯಾವುದೇ ಪ್ರಯಾಣಿಕರನ್ನು ವಿಮಾನದಲ್ಲಿ ಪ್ರತ್ಯೇಕಿಸಲು ವಿಮಾನದ ಮೂರು ಸಾಲುಗಳನ್ನು ಖಾಲಿ ಇರಿಸಲು ಸಲಹೆ ನೀಡಿದೆ. ವಿಮಾನಯಾನ ಸಂಸ್ಥೆ ಮತ್ತು ವಿಮಾನ ನಿಲ್ದಾಣ ನಿರ್ವಾಹಕರು ಸೇರಿ ಮಧ್ಯಸ್ಥಗಾರರೊಂದಿಗೆ ಚರ್ಚಿಸಿದ ನಂತರ ಕರಡು ಎಸ್‌ಒಪಿ ತಯಾರಿಸಲಾಗಿದೆ. ಈ ಬಗ್ಗೆ ಮಧ್ಯಸ್ಥಗಾರರಿಂದ ಪ್ರತಿಕ್ರಿಯೆಗಳನ್ನು ಕೋರಲಾಗಿದೆ ಎಂದು ಮೂಲಗಳು ತಿಳಿಸಿವೆ.