ಇಂಫಾಲ್: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್ಎಸ್ಎಐ) ನಿಯಮಗಳನ್ನು ಪಾಲಿಸದ ಚೀನಾ, ಮ್ಯಾನ್ಮಾರ್ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ಪ್ಯಾಕೇಜ್ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವುದನ್ನು ಮಣಿಪುರ ಸರ್ಕಾರ ನಿಷೇಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಣಿಪುರ ಸರ್ಕಾರದ ಅಧಿಸೂಚನೆ ಉಲ್ಲೇಖಿಸಿ ಕೇಂದ್ರ ಆರೋಗ್ಯ ಸೇವೆಗಳ ನಿರ್ದೇಶನಾಲಯದ ಹೆಚ್ಚುವರಿ ಆಹಾರ ಸುರಕ್ಷತಾ ಆಯುಕ್ತರು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ. 'ಚೀನಾ, ಮ್ಯಾನ್ಮಾರ್ ಮತ್ತು ಇತರ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ತಯಾರಿಸಿದ ಯಾವುದೇ ಪ್ಯಾಕೇಜ್ ಮಾಡಲಾದ ಆಹಾರ ಪದಾರ್ಥಗಳನ್ನು ಯಾವುದೇ ವ್ಯಕ್ತಿಯು ಆಮದು ಮಾಡಿಕೊಳ್ಳಬಾರದು. ಅದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಆಮದು) 2017ರ ನಿಯಮಗಳನ್ನು ಅನುಸರಿಸುತ್ತಿಲ್ಲ ಎಂದು ನಿಷೇಧಕ್ಕೆ ಸ್ಪಷ್ಟನೆ ನೀಡಿದೆ.