ನವದೆಹಲಿ: ಮಾರಣಾಂತಿಕ ಕೊರೊನಾ ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ 3,000ಕ್ಕೂ ಅಧಿಕ ಜನರನ್ನು ಬಲಿ ಪಡೆದುಕೊಂಡಿದ್ದಾರೆ. ಜೊತೆಗೆ ಜನ ಜೀವನದ ನಿತ್ಯದ ಚಟುವಟಿಕೆಗಳಿಗೂ ತೀವ್ರ ಅಡ್ಡಿ ಉಂಟುಮಾಡುತ್ತಿದೆ.
ಜರ್ಮನಿ ಕೂಡ ಕೋವಿಡ್ ಸೋಂಕಿಗೆ ಸಿಲುಕಿದ್ದು, ಅಲ್ಲಿನ ಆರೋಗ್ಯ ಸಚಿವಾಲಯವು ಔಷಧಿಗಳ ರಫ್ತು ವಹಿವಾಟನ್ನು ನಿಷೇಧಿಸಿ ನಾಗರಿಕರಿಗೆ ಅಗತ್ಯವಿರುವಷ್ಟು ಮಾಸ್ಕ್ ಮತ್ತು ಗ್ಲೌಸ್ಗಳ ದಾಸ್ತಾನು ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದೆ.
ಫೇಸ್ಬುಕ್ನಿಂದ ಉಚಿತ ಜಾಹೀರಾತು:
ವಿಶ್ವ ಆರೋಗ್ಯ ಸಂಸ್ಥೆಗೆ ಉಚಿತ ಜಾಹೀರಾತು ನೀಡುವ ಮೂಲಕ ಸಾಮಾಜಿಕ ಜಾಲತಾಣವು ವೈರಸ್ ಸಂಬಂಧಿತ ತಪ್ಪು ಮಾಹಿತಿಯನ್ನು ತಡೆಯುವ ಪ್ರಯತ್ನವನ್ನು ಚುರುಕುಗೊಳಿಸುತ್ತಿದೆ ಎಂದು ಫೇಸ್‌ಬುಕ್ ಸಿಇಒ ಮಾರ್ಕ್ ಝುಕರ್ಬರ್ಗ್ ಹೇಳಿದ್ದಾರೆ.
ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡ ಝುಕರ್ಬರ್ಗ್, ಕಂಪನಿಯು ರಾಷ್ಟ್ರೀಯ ಆರೋಗ್ಯ ಸಚಿವಾಲಯಗಳು ಮತ್ತು ಜಾಗತಿಕ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ವೈರಸ್ ಬಗ್ಗೆ ಸಮಯೋಚಿತ ಮತ್ತು ನಿಖರವಾದ ಮಾಹಿತಿಯನ್ನು ಪಡೆಯಲು ವಿಶ್ವ ಆರೋಗ್ಯ ಸಂಸ್ಥೆ, ಅಮೆರಿಕ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಹಾಗೂ ಯುನಿಸೆಫ್ ಜತೆಗೆ ಕೈಜೋಡಿಸಲಿದೆ ಎಂದರು.
ಉದ್ಯಮಿಗಳಿಂದ ಮಾರ್ಗದರ್ಶನ:
ಮಹೀಂದ್ರ ಗ್ರೂಪ್ನ ಅಧ್ಯಕ್ಷ ಆನಂದ್ ಮಹೀಂದ್ರ ಅವರು, 'ವರ್ಕ್ ಫ್ರಮ್ ಹೋಮ್ನಂತಹ ನಡೆಗಳನ್ನು ಇನ್ನೂ ಹೆಚ್ಚಿಸಬೇಕು. ಸೋಂಕು ಉಲ್ಬಣ ನಿಯಂತ್ರಣಕ್ಕೆ ಬರುವ ವಿಶ್ವಾಸವಿದೆ. ಪ್ರಯಾಣ ಮಾಡುವುದನ್ನು ಕಡಿಮೆಮಾಡಿ. ಹೊರ ಹೋಗುವುದನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಿ' ಎಂದು ಸಂದೇಶ ನೀಡಿದ್ದಾರೆ.
ಮತ್ತೋರ್ವ ಉದ್ಯಮಿ ಹರೀಶ್ ಮಾರಿವಾಲಾ, ಸೋಂಕಿನ ಕುರಿತು ತಪ್ಪಾದ ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸಬಾರದು. ವಾಟ್ಸ್ಆ್ಯಪ್ನಲ್ಲಿ ಹರಿದಾಡು ಸಂದೇಶಗಳ ಅಧಿಕೃತ ಮೂಲದ ಬಗ್ಗೆ ಗಮನವಹಿಸಿ ಎಂದಿದ್ದಾರೆ.
ಡೈರಿ ದೈತ್ಯ ಅಮೂಲ್ ಕೂಡ ಕೋವಿಡ್-19 ವೈರಾಣು ಬಗ್ಗೆ ಜಾಗೃತಿಯ ಸಂದೇಶವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, 'ಸುರಕ್ಷತೆ ಹಾಗೂ ಮುಂಜಾಗೃತಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತೇನೆ' ಎಂದು ಬರೆದುಕೊಂಡಿದೆ.
ಹ್ಯಾಂಡ್ವಾಸ್ ಮಾಡುತ್ತಿರುವ ಅಮೂಲ್ ಬೇಬಿ ಚಿತ್ರದೊಂದಿಗೆ Better saaf than sorry' ಎಂಬ ಸಂದೇಶದ ಕಾರ್ಟೂನ್ ಚಿತ್ರ ಹಂಚಿಕೊಂಡಿದೆ.